2022ರ ವೇಳೆಗೆ ಬಾಹ್ಯಾಕಾಶಕ್ಕೆ ಮೊದಲ ಭಾರತೀಯನನ್ನು ಕಳುಹಿಸುವತ್ತ ದಾಪುಗಾಲು : ರಾಷ್ಟ್ರಪತಿ ಕೋವಿಂದ್

ನವದೆಹಲಿ, ಜೂ 20 – 2022 ರ ವೇಳೆಗೆ ಗಗನಯಾನದಲ್ಲಿ ಮೊದಲ ಭಾರತೀಯನನ್ನು ಕಳುಹಿಸಲು ದೇಶ ದಾಪುಗಾಲಿಡುತ್ತಿದೆ ಎಂದು ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಗುರುವಾರ ಹೇಳಿದ್ದಾರೆ.

ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಅವರು, ಚಂದ್ರಯಾನ – 2 ಕ್ಕೆ ನಮ್ಮ ವಿಜ್ಞಾನಿಗಳು ಸಿದ್ಧತೆ ನಡೆಸಿದ್ದು ಚಂದ್ರನ ಮೇಲೆ ಮೊದಲು ಭಾರತೀಯರು ನೆಲೆ ನಿಲ್ಲಲಿದ್ದಾರೆ. 2022 ರ ವೇಳೆಗೆ ಗಗನಯಾನದಲ್ಲಿ  ಮೊದಲ ಭಾರತೀಯನನ್ನು ಕಳುಹಿಸುವತ್ತ ಭಾರತ ದಾಪುಗಾಲಿರಿಸಿದೆ ಎಂದರು.

ಸಾಮಾನ್ಯ ಮಾನವನ ಜೀವನ ಸುಧಾರಣೆಗೆ ಬಾಹ್ಯಾಕಾಶ ತಂತ್ರಜ್ಞಾನ ನೆರವಾಗಿದ್ದು ವಿಪತ್ತು ಮುನ್ನೆಚ್ಚರಿಕೆ, ಸಂಪನ್ಮೂಲಗಳ ಗುರುತಿಸುವಿಕೆ, ವಿವಿಧ ಸಂವಹನ ಮಾಧ್ಯಮಗಳಿಗೆ ಸಂಕೇತ ನೀಡಿಕೆ ಮತ್ತು ರಾಷ್ಟ್ರೀಯ ಭದ್ರತೆ ಖಾತರಿ ಪಡಿಸಿವೆ ಎಂದು ಅವರು ವಿವರಿಸಿದರು.

ಮಾನವ ಕಲ್ಯಾಣಕ್ಕಾಗಿ ಬಾಹ್ಯಾಕಾಶ ತಂತ್ರಜ್ಞಾನದ ಸಮರ್ಥ ಬಳಕೆ ತಮ್ಮ ಸರ್ಕಾರದ ಪ್ರಯತ್ನ ಎಂದ ಅವರು, ರಸ್ತೆ, ಬಡವರಿಗೆ ಮನೆ, ಕೃಷಿ ಮತ್ತು ಮೀನುಗಾರಿಕೆಗೆ ಅಗತ್ಯ ಉಪಕರಣ ಮೊದಲಾದವು ಬಾಹ್ಯಾಕಾಶದೊಂದಿಗೆ ಸಂಪರ್ಕ ಹೊಂದಿವೆ ಎಂದರು.

ಹವಾಮಾನ ಅಂದಾಜು ನಿಖರತೆ ಹೆಚ್ಚಿದೆ. ಇತ್ತೀಚಿನ ಚಂಡಮಾರುತ ಫೋನಿ ಇದಕ್ಕೆ ಸಾಕ್ಷಿ ಎಂದು ಅವರು ಬಾಹ್ಯಾಕಾಶ ತಂತ್ರಜ್ಞಾನದ ಲಾಭವನ್ನು ತಿಳಿಸಿದರು.

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಭಾರತ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದು ಇದಕ್ಕೆ ಹೆಚ್ಚು ಗಮನ ದೊರೆಯಲಿಲ್ಲ ಎಂದು ಹೇಳಿದ ಅವರು, ಭಾರತದ ಬಾಹ್ಯಾಕಾಶ ತಂತ್ರಜ್ಞಾನ ಸಾಮರ್ಥ್ಯಕ್ಕೆ ‘ಮಿಷನ್ ಶಕ್ತಿ’ ಮತ್ತೊಂದು ಸೇರ್ಪಡೆಯಾಗಿದ್ದು ವಿಜ್ಞಾನಿಗಳು ಮತ್ತು ತಂತ್ರಜ್ಞರಿಗೆ ಅಭಿನಂದನೆ ಸಲ್ಲಿಸಿದರು.

  ಭದ್ರತಾ ವಲಯದಲ್ಲೂ ತಂತ್ರಜ್ಞಾನ ಪಾತ್ರ ವಿಸ್ತರಿಸುತ್ತಿದ್ದು ಬಾಹ್ಯಾಕಾಶ, ಸೈಬರ್ ಮತ್ತು ವಿಶೇಷ ಪಡೆಗಳ ಜಂಟಿ ಸೇವೆ ಒದಗಿಸುವ ಪ್ರಯತ್ನ ನಡೆದಿದೆ ಎಂದು ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ತಿಳಿಸಿದರು.

Leave a Comment