2.30 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಪಿರಿಯಾಪಟ್ಟಣ: ಅ.22- ಸರ್ಕಾರ ಬದಲಾದರೂ ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸುವಂತೆ ಕೋರಿ ಅನುದಾನ ನೀಡುವಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ಶಾಸಕ ಕೆ.ಮಹದೇವ್ ಹೇಳಿದರು.
ತಾಲ್ಲೂಕಿನ ಬಿಲ್ಲಹಳ್ಳಿ ಗ್ರಾಮದಲ್ಲಿ ಒಟ್ಟು 2.30 ಕೋಟಿ ವೆಚ್ಚ ಎರಡು ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿದರು. ಸರ್ಕಾರ ಬದಲಾಗಿದ್ದರಿಂದ ಕ್ಷೇತ್ರಕ್ಕೆ ಮೊದಲಿನಂತೆ ಅನುದಾನ ಪಡೆದು ಕ್ಷೇತ್ರದ ಜನರ ಬೇಡಿಕೆ ಈಡೇರಿಸಲು ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಸೀಗೂರು ಗೇಟ್ ನಿಂದ ಬಿಲ್ಲಹಳ್ಳಿ ಗ್ರಾಮ ಮಾರ್ಗವಾಗಿ ಕೋಮಲಾಪುರಕ್ಕೆ ತೆರಳುವ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು ಜನರು ನಡೆದು ಕೊಂಡು ಸಹ ತಿರುಗಾಡದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ರಸ್ತೆಯನ್ನು ದುರಸ್ತಿ ಪಡಿಸುವಂತೆ ಗ್ರಾಮಸ್ಥರು ಸತತ ಒತ್ತಡ ಹೇರಿದ್ದರಿಂದ 2. ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡುವುದರ ಜೊತೆಗೆ ಗ್ರಾಮದಲ್ಲಿ ಸ್ಥಳೀಯ ಅಗತ್ಯಕ್ಕನುಗುಣವಾಗಿ ರಸ್ತೆ ನಿರ್ಮಿಸುವಂತೆ ಸೂಚಿಸಿದರು.
ಎಲ್ಲ ಗ್ರಾಮಗಳ ಅಭಿವೃದ್ಧಿಗೆ ಹಂತ ಹಂತವಾಗಿ ಅನುದಾನ ನೀಡುವ ಯೋಜನೆ ರೂಪಿಸಲಾಗಿದ್ದು ಗ್ರಾಮಸ್ಥರು ಹತಾಶರಾಗ ಬೇಕಿಲ್ಲ ಎಂದರು.
ಈ ಸಂದರ್ಭದಲ್ಲಿ ಹಿಟ್ನೆಹೆಬ್ಬಾಗಿಲು ಗ್ರಾ.ಪಂ. ಅಧ್ಯಕ್ಷ ರಾಜಶೇಖರ, ಸದಸ್ಯರಾದ ಬಿ.ಆರ್.ರಮೇಶ್, ಗೀತಾ ಭೀಮಯ್ಯ, ಪಿಡಿಒ ಪ್ರಶಾಂತ್, ಕಾರ್ಯದರ್ಶಿ ದಮಯಂತಿ, ಮುಖಂಡರಾದ ಬಿ.ಪಿ. ಚಂದ್ರಪ್ಪ, ಮಹದೇವ, ಸ್ವಾಮಿಗೌಡ, ಭೀಮಯ್ಯ, ಕುಬೇರಪ್ಪ, ವೀರಭದ್ರ, ಗಣೇಶ, ಸೇರಿದಂತೆ ಮತ್ತಿತರರು ಹಾಜರಿದ್ದರು.

Leave a Comment