2 ನೇ ದಿನವೂ ಮುಂದುವರೆದ ಪ್ರತಿಭಟನೆ

ಮೈಸೂರು. ಸೆ, 5. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮೈಸೂರು ವಿ.ವಿ. ಯ ಮಹಿಳಾ ಸ್ವಚ್ಛ ಕಾರ್ಮಿಕರು ನಿನ್ನೆಯಿಂದ ನಡೆಸುತ್ತಿದ್ದ ಪ್ರತಿಭಟನೆಯನ್ನು ಇಂದೂ ಮುಂದುವರೆಸಿದರು.
ನಿನ್ನೆ ಬೆಳಿಗ್ಗೆ ಮಾನಸ ಗಂಗೋತ್ರಿಯಲ್ಲಿರುವ ಕುವೆಂಪು ಪುತ್ಥಳಿಯ ಮುಂದೆ ಪ್ರತಿಭಟನೆಯನ್ನು ಆರಂಭಿಸಿದ ಮಹಿಳಾ ಸ್ವಚ್ಛ ಕಾರ್ಮಿಕರು ನಿನ್ನೆ ಮದ್ಯಾನ್ಹ ಮತ್ತು ರಾತ್ರಿ ಕುವೆಂಪುರವರ ಪುತ್ಥಳಿಯ ಮುಂದೆಯೇ ಅಡುಗೆಯನ್ನು ಸಿದ್ಧ ಪಡಿಸಿ. ಊಟಮಾಡಿ ರಾತ್ರಿ ಅಲ್ಲಿಯೇ ವಾಸ್ತವ್ಯ ಹೂಡಿದ್ದರು.
ಇಂದು ಬೆಳಿಗ್ಗೆ ಪ್ರತಿಭಟನಾ ಸ್ಥಳಕ್ಕೆ ತೆರಳಿದ ಸುದ್ಧಿಗಾರರೊಂದಿಗೆ ಮಾತನಾಡಿದ ಪ್ರತಿಭಟನಾಕಾರರು ನಮ್ಮ ಪ್ರಮುಖ ಬೇಡಿಕೆಗಳಾದ ಇ.ಎಸ್.ಐ ಮತ್ತು ಪಿ.ಎಫ್ ಸೌಲಭ್ಯಗಳು ಶೀಘ್ರವೇ ನಮಗೆ ಸಿಗುವಂತಾಗಬೇಕು. ಕಳೆದ 3 ತಿಂಗಳುಗಳಿಂದ ನಮಗೆ ನೀಡಬೇಕಾಗಿರುವ ವೇತನವನ್ನು ಈ ವಾರದೊಳಗೆ ನೀಡಬೇಕು. ಈ ದಿಸೆಯಲ್ಲಿ ವಿ.ವಿ.ಯ ಮುಖ್ಯಸ್ಥರು ತಮ್ಮ ಅಧೀನಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಒತ್ತಾಯಿಸಿದರು. ಒಂದು ವೇಳೆ ಈ ವಾರದೊಳಗಾಗಿ ನಮ್ಮ ಬೇಡಿಕೆಗಳು ಈಡೇರದಿದ್ದಲ್ಲಿ ಮುಂದಿನ ದಿನಗಳಲ್ಲಿ ನಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದೆಂಬ ಎಚ್ಚರಿಕೆಯನ್ನು ನೀಡಿದರು.
ಇಂದು ಬೆಳಗ್ಗೆ ಪ್ರತಿಭಟನಾಸ್ಥಳಕ್ಕೆ ಆಗಮಿಸಿದ ಕೃಷ್ಣರಾಜ ಕ್ಷೇತ್ರ ಶಾಸಕ ಎಸ್.ಎ.ರಾಮದಾಸ್ ಬೇಟಿ ನೀಡಿ ಪ್ರತಿಭಟನಾಕಾರರಿಂದ ಪೂರ್ಣವಿವರಗಳನ್ನು ಪಡೆದ ನಂತರ ಈ ವಿಷಯದ ಬಗ್ಗೆ ನಾನು ಶೀಘ್ರದಲ್ಲಿಯೇ ಮೈಸೂರು ವಿ.ವಿ ಯ ಮುಖ್ಯಸ್ಥರೊಂದಿಗೆ ಚರ್ಚಿಸಿ ನಿಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕೊಡಿಸಿಕೊಡುತ್ತೇನೆಂದು ಭರವಸೆ ನೀಡಿದರು.

Leave a Comment