2 ದಶಕಗಳ ನಂತರ ಕೈ ಸೇರಿದ ಹಣ

ನವದೆಹಲಿ, ಆ. ೧೩- ಗೋಲ್ಡನ್ ಫಾರೆಸ್ಟ್ ಬಂಡವಾಳ ಹೂಡಿಕೆಯ ಸಂಸ್ಥೆಯಲ್ಲಿ ಲಕ್ಷಾಂತರ ರೂ. ಹೂಡಿಕೆ ಮಾಡಿ ಪಂಗನಾಮ ಹಾಕಿಸಿಕೊಂಡಿದ್ದ ಸುಮಾರು 14 ಲಕ್ಷ ಮಂದಿ ಹೂಡಿಕೆದಾರರಿಗೆ ಎರಡು ದಶಕಗಳ ನಂತರ ಕೊನೆಗೂ ಹೂಡಿಕೆಯ ಹಣ ಇನ್ನು ಮೂರು ತಿಂಗಳ ಒಳಗೆ  ಕೈ ಸೇರಲಿದೆ.

ಸುಪ್ರೀಂ ಕೋರ್ಟ್‌ನ ಮಧ್ಯ ಪ್ರವೇಶದಿಂದಾಗಿ, 700 ಕೋಟಿ ರೂ. ಮೊತ್ತ ಹೂಡಿಕೆದಾರರಿಗೆ ಹಂಚಲಾಗುತ್ತಿದೆ. ಹೀಗಾಗಿ ವಂಚನೆಗೆ ಒಳಗಾದವರಿಗೆ ಸುದೀರ್ಘ ಅವಧಿಯ ನಂತರವಾದರೂ ನ್ಯಾಯ ಸಿಕ್ಕಂತಾಗಿದೆ.

ಈ ಸಂಸ್ಥೆಯ ಆಸ್ತಿಪಾಸ್ತಿಯನ್ನು ಮಾರಾಟ ಮಾಡಿ ಬಂದ ಮೊತ್ತದಲ್ಲಿ 700 ಕೋಟಿ ರೂ. ಗಳನ್ನು ಹೂಡಿಕೆದಾರರಿಗೆ ಹಿಂದಿರುಗಿಸಲು ಇತ್ತೀಚೆಗೆ ಸುಪ್ರೀಂ ನ್ಯಾಯಪೀಠ ನಿರ್ದೇಶನ ನೀಡಿದೆ.

ಚಂಡೀಘಡ ಮೂಲದ ಗೋಲ್ಡನ್ ಫಾರೆಸ್ಟ್ ಇಂಡಿಯಾ ಲಿಮಿಟೆಡ್ ಸಂಸ್ಥೆಯನ್ನು 1987 ರಲ್ಲಿ ಅಸ್ತಿತ್ವಕ್ಕೆ ತರಲಾಗಿತ್ತು. ಈ ಹೂಡಿಕೆಯ ಸಂಸ್ಥೆಯಲ್ಲಿ ಹಣ ಹೂಡಿದವರಿಗೆ ಶೇ. 20 ರಷ್ಟು ಬಡ್ಡಿ ದರದಲ್ಲಿ ಹಣವನ್ನು ಹಿಂದಿರುಗಿಸಲಾಗುವುದು ಎಂಬುದು ಈ ಸಂಸ್ಥೆ ತನ್ನ ಹೂಡಿಕೆದಾರರ ಮುಂದೆ ಇಟ್ಟಿದ್ದ ಪ್ರಮುಖ ಆಕರ್ಷಣೀಯ ಅಂಶ.

ಲಕ್ಷಾಂತರ ಮಂದಿ ವಿಶೇಷವಾಗಿ ಮಧ್ಯಮ ವರ್ಗದ ಕುಟುಂಬಗಳು ಇದರಲ್ಲಿ ಹಣ ತೊಡಗಿಸಿದ್ದರು. ಹೂಡಿಕೆಯ ಕನಿಷ್ಟ ಮೊತ್ತ ಒಂದು ಸಾವಿರ ರೂ. ಅದರ ಮೇಲೆ ಹೆಚ್ಚಿನ ಮೊತ್ತ ಹೂಡಬಹುದಾಗಿತ್ತು. ಹೂಡಿಕೆಯ ಮೊತ್ತದಿಂದ ಭೂಮಿಯ ಖರೀದಿ, ಅದರಲ್ಲಿ ಸಾಮಾಜಿಕ ಅರಣ್ಯ ಬೆಳೆಯುವುದು, ಆ ಮೂಲಕ ಹೆಚ್ಚಿನ ಮೊತ್ತ ಕ್ರೋಢೀಕರಿಸುವುದು ಈ ಸಂಸ್ಥೆಯ ಯೋಜನೆಯ ಮುಖ್ಯಗುರಿ.

ಆದರೆ ಅಂತಹ ಯಾವುದೇ ಚಟುವಟಿಕೆಗಳನ್ನು ನಡೆಸದ ಸಂಸ್ಥೆ ಹೂಡಿಕೆದಾರರಿಗೆ ಹಣವನ್ನು ಹಿಂತಿರುಗಿಸಲಿಲ್ಲ. ಈ ಸಂಸ್ಥೆಯಿಂದ ಭಾರೀ ವಂಚನೆಗೆ ಒಳಗಾಗಿದ್ದೇವೆ ಎಂದು ಅರಿತ ಹೂಡಿಕೆದಾರರು, ನಂತರದಲ್ಲಿ ನ್ಯಾಯಾಲಯದ ಮೆಟ್ಟಿಲು ಏರಿದ್ದರು.

2004 ರಲ್ಲಿ ಸುಪ್ರೀಂ ಕೋರ್ಟ್ ಈ ವಿಷಯದಲ್ಲಿ ಮಧ್ಯೆ ಪ್ರವೇಶಿಸಿ, ಪಂಜಾಬ್, ಹರಿಯಾಣ ಹೈಕೋರ್ಟ್‌ನ ನ್ಯಾಯಮೂರ್ತಿ ಆರ್.ಎಂ. ಅಗರ್‌ವಾಲ್ ನೇತೃತ್ವದಲ್ಲಿ ಸಮಿತಿ ರಚಿಸಿ, ಹೂಡಿಕೆದಾರರಿಗೆ  ನ್ಯಾಯ ಒದಗಿಸಲು ಸಮಿತಿಗೆ ಸೂಚಿಸಲಾಗಿತ್ತು.

ಆ ಸಮಿತಿ ನೀಡಿದ್ದ ವರದಿಯ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈಗ ಹೂಡಿಕೆದಾರರಿಗೆ ಮೂರು ತಿಂಗಳ ಒಳಗಾಗಿ ಹಣ ಹಿಂತಿರುಗಿಸಲು ನಿರ್ದೇಶಿಸಿದೆ.

Leave a Comment