2 ಕೋ. ವಶಪಡಿಸಿಕೊಂಡ ಐಟಿ : ಚುನಾವಣೆಗೆ ಗುತ್ತಿಗೆದಾರರಿಂದ ಸಂಗ್ರಹಿಸಿದ್ದ ಹಣ

(ನಮ್ಮ ಪ್ರತಿನಿಧಿಯಿಂದ)

ಬೆಂಗಳೂರು, ಮಾ. ೧೫- ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ಅಕ್ರಮ ಹಣ ಚುನಾವಣೆಯಲ್ಲಿ ಬಳಕೆಯಾಗುವುದರ ಬಗ್ಗೆ ಹದ್ದಿನ ಕಣ್ಣಿಟ್ಟಿರುವ ಆದಾಯ ತೆರಿಗೆ ಅಧಿಕಾರಿಗಳು ಇಂದು ಗ್ರಾಮೀಣಾಭಿವೃದ್ಧಿ ಇಲಾಖೆಯ ಎಂಜಿನಿಯರ್‌ರೊಬ್ಬರಿಂದ 2 ಕೋಟಿ ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.

ಹಾವೇರಿಯ ಗ್ರಾಮೀಣಾಭಿವೃದ್ಧಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ನಾರಾಯಣಗೌಡ ಬಿ. ಪಾಟೀಲ್ ಹಾವೇರಿಯಿಂದ ನಗರಕ್ಕೆ ಆಗಮಿಸಿ ಆನಂದರಾವ್ ವೃತ್ತ ಸಮೀಪದ ಹೋಟೆಲ್‌ನಲ್ಲಿ ತಂಗಿದ್ದರು. ಖಚಿತ ಮಾಹಿತಿ ಮೇರೆಗೆ ಐಟಿ ಅಧಿಕಾರಿಗಳು ಹೋಟೆಲ್‌‌ಗೆ ತೆರಳಿ ಕಾರ್ಯಪಾಲಕ ಅಭಿಯಂತರ ನಾರಾಯಣಗೌಡ ಬಿ. ಪಾಟೀಲ್ ಅವರಿಂದ 2 ಕೋಟಿ ರೂ.ಗಳಿಗೂ ಅಧಿಕ ಹಣವನ್ನು ವಶಪಡಿಸಿಕೊಂಡಿದ್ದಾರೆ.

ಈ ಎಂಜಿನಿಯರ್ ಚುನಾವಣೆಗೆಂದು ಗುತ್ತಿಗೆದಾರರಿಂದ ಈ ಹಣವನ್ನು ಸಂಗ್ರಹಿಸಿದ್ದರು ಎನ್ನಲಾಗಿದ್ದು, ರಾಜ್ಯದ ಪ್ರಭಾವಿ ಸಚಿವರೊಬ್ಬರಿಗೆ ಈ ಹಣ ತಲುಪಿಸಲು ನಗರಕ್ಕೆ ಬಂದಿದ್ದರು ಎನ್ನಲಾಗಿದ್ದು, ಈ ವಿಚಾರ ಇನ್ನೂ ಖಚಿತವಾಗಿಲ್ಲ.

ಐಟಿ ಅಧಿಕಾರಿಗಳು ತಮ್ಮ ಕೊಠಡಿಗೆ ಬಂದು ದಾಳಿ ಮಾಡಿದ ಕೂಡಲೇ ಬಂಧನದ ಭೀತಿಯಿಂದ ಅಧಿಕಾರಿ ನಾರಾಯಣಗೌಡ ತಲೆ ಮರೆಸಿಕೊಂಡು ಪರಾರಿಯಾಗಿದ್ದಾರೆ. ಅವರಿಗೆ ಸೇರಿದ ಇನೋವಾ ಕಾರು ಮತ್ತು ಕಾರಿನ ಚಾಲಕನ್ನು ಐಟಿ ಅಧಿಕಾರಿಗಳು ವಶಕ್ಕೆ ಪಡೆದು ಹೆಚ್ಚಿನ ಮಾಹಿತಿ ಸಂಗ್ರಹಿಸಿದ್ದಾರೆ.

ಹಲವು ದಿನಗಳಿಂದ ನಾರಾಯಣಗೌಡರ ಚಲನವಲನದ ಮೇಲೆ ಐಟಿ ಅಧಿಕಾರಿಗಳು ಕಣ್ಣಿಟ್ಟಿದ್ದರು ಎನ್ನಲಾಗಿದೆ.

ನಗದಲ್ಲಿ ಐಟಿ ಅಧಿಕಾರಿಗಳು 2 ಕೋಟಿರೂ,. ವಶಪಡಿಸಿಕೊಂಡಿರುವ ಬೆನ್ನಲ್ಲೇ ಹಾವೇರಿಯ ನಂದಿನಿ ಲೇಔಟ್‌ನಲ್ಲಿರುವ ನಾರಾಯಣಗೌಡ ಅವರ ಮನೆಯ ಮೇಲೂ ದಾಳಿ ನಡೆಸಿ 25 ಲಕ್ಷ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.

ಈ ಹಣ ಯಾರಿಗೆ ಸೇರಿದ್ದು, ಯಾರಿಗೆ ನೀಡಲು ತೆಗೆದುಕೊಂಡು ಹೋಗಲಾಗುತ್ತಿತ್ತು ಎಂಬ ಬಗ್ಗೆ ಐಟಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ..

ಹದ್ದಿನ ಕಣ್ಣು

ಲೋಕಸಭಾ ಚುನಾವಣೆ ಘೋಷಣೆಯಾದ ನಂತರ ಐಟಿ ಅಧಿಕಾರಿಗಳ ತಂಡ ರಾಜ್ಯದ ಸಂಪನ್ಮೂಲ ಇಲಾಖೆಗಳ ಅಧಿಕಾರಿಗಳ ಮೇಲೆ ಕಣ್ಣಿಟ್ಟಿದ್ದು ಅದರಲ್ಲೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯ್ತ ರಾಜ್, ಲೋಕೋಪಯೋಗಿ, ಇಂಧನ, ಬೃಹತ್ ನೀರಾವರಿ, ಬೃಹತ್ ಕೈಗಾರಿಕೆ, ಕಂದಾಯ ಸೇರಿದಂತೆ ಹೆಚ್ಚಿನ ಆದಾಯ ಇರುವ ಇಲಾಖೆಗಳ ಅಧಿಕಾರಿಗಳ ಚಲನವಲನದ ಮೇಲೆ ನಿಗಾ ವಹಿಸಿದ್ದು, ಕೆಲ ಅಧಿಕಾರಿಗಳು ಚುನಾವಣೆಗಾಗಿ ಗುತ್ತಿಗೆದಾರರಿಂದ ಹಣ ಸಂಗ್ರಹಿಸುತ್ತಿರುವ ಮಾಹಿತಿ ಐಟಿ ವಿಭಾಗದ ಗುಪ್ತಚರ ಅಧಿಕಾರಿಗಳಿಗೆ ತಲುಪಿಸಿತ್ತು. ಅದರಂತೆ ಇಂದು ಐಟಿ ಅಧಿಕಾರಿಗಳು ಕಾರ್ಯಾಚರಣೆಗಿಳಿದು ಗ್ರಾಮೀಣಾಭಿವೃದ್ಧಿ ಇಲಾಖೆಯ ಎಂಜಿನಿಯರ್ ನಾರಾಯಣಗೌಡ ಅವರ ಬಳಿ ಇದ್ದ 2 ಕೋಟಿ ನಗದು ವಶಪಡಿಸಿಕೊಂಡಿದ್ದಾರೆ.

ನಾರಾಯಣಗೌಡ ತಂಗಿದ್ದ ಹೋಟೆಲ್‌ನ ಕೊಠಡಿಯಿಂದ 2 ಕೋಟಿ ರೂ. ನಗದು, ಲ್ಯಾಪ್‌ಟ್ಯಾಪ್ ಸೇರಿದಂತೆ ಕೆಲವು  ದಾಖಲೆ ಪತ್ರಗಳನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

Leave a Comment