2ನೇ ಏಕದಿನ ಪಂದ್ಯದಲ್ಲಿ ಸೋತ ಭಾರತ – ಸರಣಿ ಕಿವೀಸ್ ಕೈವಶ

ಆಕ್ಲೆಂಡ್, ಫೆ 8- – ಟಿ20 ಸರಣಿಯಲ್ಲಿ 5 ಪಂದ್ಯಗಳನ್ನು ಗೆದ್ದು ಬೀಗಿದ ಭಾರತ ಇಂದು ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಸೋತು ನ್ಯೂಜಿಲೆಂಡ್‌ಗೆ ಸರಣಿಯನ್ನು ಬಿಟ್ಟುಕೊಟ್ಟಿದೆ.

ಇಲ್ಲಿನ ಇಲ್ಲಿನ ಈಡಾನ್ ಪಾರ್ಕ್ ಅಂಗಳದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡು ಭಾರತ ಕಿವೀಸ್ ಆಟಗಾರರನ್ನು 8 ವಿಕೆಟ್ ನಷ್ಟಕ್ಕೆ 273 ರನ್‌ಗೆ ಕಡಿವಾಣ ಹಾಕಿತ್ತು, ಆದರೆ ಟೀಂ ಇಂಡಿಯಾ ಆಟಗಾರರು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲುವಲ್ಲಿ ವಿಪಲವಾದರು.

ನ್ಯೂಜಿಲೆಂಡ್ ನೀಡಿದ್ದ 273 ರನ್ ಗಳ ಸವಾಲಿನ ಗುರಿಯನ್ನು ಬೆನ್ನು ಹತ್ತಿದ ಟೀಂ ಇಂಡಿಯಾ 48-3 ಓವರ್ ನಲ್ಲಿ 251 ರನ್ ಗಳಿ ಆಲೌಟ್ ಆಯಿತು. ಆ ಮೂಲಕ 22 ರನ್ ಗಳ ಅಂತರದಲ್ಲಿ ಕಿವೀಸ್ ವಿರುದ್ಧ ಸೋಲು ಕಂಡಿದೆ. ಅಂತೆಯೇ 3 ಪಂದ್ಯಗಳ ಏಕದಿನ ಸರಣಿಯನ್ನೂ 2-0 ಅಂತರದಲ್ಲಿ ಸೋತಿದೆ.

india-new-1jpg

ಸೈನಿ-ರವೀಂದ್ರ ಜಡೇಜಾ ಹೋರಾಟ ವ್ಯರ್ಥ
ಆರಂಭಕರಾದ ಮಯಾಂಕ್ ಅಗರ್ವಾಲ್ ಕೇವಲ 3 ರನ್ ಗಳಿಗೆ ಔಟ್ ಆದರೆ, ಮತ್ತೋರ್ವ ಆಟಗಾರ ಪೃಥ್ವಿ ಶಾ 24 ರನ್ ಗಳಿಸಿ ಔಟ್ ಆದರು. ಆ ಬಳಿಕ ಬಂದ ನಾಯಕ ಕೊಹ್ಲಿ ಕೂಡ ಕೇವಲ 15 ರನ್ ಗಳಿಸಿ ಸೌಥಿ ಬೌಲಿಂಗ್ ನಲ್ಲಿ ಕ್ಲೀನ್ ಬೋಲ್ಡ್ ಆದರು. ಈ ಹಂತದಲ್ಲಿ ಸಮಯೋಚಿತ ಬ್ಯಾಟಿಂಗ್ ಪ್ರದರ್ಶನ ನೀಡಿದ ಶ್ರೇಯಸ್ ಅಯ್ಯರ್ ಅರ್ಧಶತಕ ಸಿಡಿಸಿ ಭಾರತ ತಂಡವನ್ನು ಆಘಾತದಿಂದ ಮೇಲೆತ್ತಲು ಯತ್ನಿಸಿದರು.

ಆದರೆ ಅವರಿಗೆ ಉಳಿದ ಆಟಗಾರರಿಂದ ಉತ್ತಮ ಸಾಥ್ ದೊರೆಯಲಿಲ್ಲ. ನ್ಯೂಜಿಲೆಂಡ್ ಸರಣಿಯುದ್ದಕ್ಕೂ ಭರ್ಜರಿ ಪ್ರದರ್ಶನ ನೀಡಿದ್ದ ಕೆಎಲ್ ರಾಹುಲ್ ಇಂದಿನ ಪಂದ್ಯದಲ್ಲಿ ಕೇವಲ 4 ರನ್ ಗಳಿಗೇ ಔಟ್ ಆಗಿದ್ದು ಭಾರತಕ್ಕೆ ಮಾರಕವಾಗಿ ಪರಿಣಮಿಸಿತು. ಬಳಿಕ ಕೇದಾರ್ ಜಾದವ್ ಕೂಡ 6 ರನ್ ಗೆ ಔಟಾದರು. ಆದರೆ ಬಳಿಕ ಬಂದ ರವೀಂದ್ರ ಜಡೇಜಾ ತಂಡವನ್ನು ಸೋಲಿನ ದವಡೆಯಿಂದ ಮೇಲೆತ್ತುವ ಪ್ರಯತ್ನ ಪಟ್ಟರು. ಜಡೇಜಾಗೆ ಸೈನಿ ಉತ್ತಮ ಸಾಥ್ ನೀಡಿದರು. ಈ ಜೋಡಿ 83 ಎಸೆತಗಳಲ್ಲಿ 76ರನ್ ಗಳ ಅಮೂಲ್ಯ ಕಾಣಿಕೆ ನೀಡಿತು. ಈ ಹಂತದಲ್ಲಿ 45 ರನ್ ಗಳಿಸಿದ್ದ ಸೈನಿ ಔಟ್ ಆದರು. ಬಳಿಕ ಬಂದ ಚಹಲ್ 10 ರನ್ ಗಳಿಸಿ ಔಟಾದರೆ, ಅಂತಿಮವಾಗಿ 55 ರನ್ ಗಳಿಸಿದ್ದ ರವೀಂದ್ರ ಜಡೇಜಾ ಔಟಾಗುವುದರೊಂದಿಗೆ ಭಾರತದ ಗೆಲುವಿನ ಕನಸು ಕಮರಿತು.

ಕಿವೀಸ್ ಪರ ಬೆನೆಟ್, ಟಿಮ್ ಸೌಥಿ, ಜೇಮೀಸನ್ ಮತ್ತು ಗ್ರಾಂಡ್ ಹೋಮ್ ತಲಾ 2 ವಿಕೆಟ್ ಪಡೆದರೆ, ನೀಶಮ್ 1 ವಿಕೆಟ್ ಪಡೆದರು.

ಬದಲಾವಣೆ
ಎರಡೂ ತಂಡಗಳು ಇಂದಿನ ಪಂದ್ಯದ ಅಂತಿಮ 11ರಲ್ಲಿ ಬದಲಾವಣೆ ಮಾಡಿಕೊಂಡಿತ್ತು. ಮೊಹಮ್ಮದ್ ಶಮಿ ಹಾಗೂ ಕುಲ್ದೀಪ್ ಯಾದವ್ ಅವರ ಬದಲಿಗೆ ನವದೀಪ್ ಸೈನಿ ಹಾಗೂ ಯಜ್ವೇಂದ್ರ ಚಾಹಲ್ ಅವರಿಗೆ ಅವಕಾಶ ನೀಡಲಾಗಿತ್ತು.

ಇನ್ನು, ನ್ಯೂಜಿಲೆಂಡ್ ತಂಡ ಇಶ್ ಸೋಧಿ ಹಾಗೂ ಮಿಚೆಲ್ ಸ್ಯಾಂಟನರ್ ಅವರ ಬದಲು ಮಾರ್ಕ್ ಚಾಪ್ಮನ್ ಮತ್ತು ಕೈಲ್ ಜಾಮಿಸನ್ ಅವರಿಗೆ ಅವಕಾಶ ನೀಡಿದೆ. ಮೂರು ಪಂದ್ಯಗಳ ಸರಣಿಯನ್ನು ಜೀವಂತವಾಗಿರಿಸಿಕೊಳ್ಳಬೇಕಾದರೆ, ಇಂದಿನ ಪಂದ್ಯದಲ್ಲಿ ಭಾರತಕ್ಕೆ ಗೆಲುವು ಅನಿವಾರ್ಯವಾಗಿತ್ತು. ಇಂದು ಮೊದಲ ಬ್ಯಾಟ್ ಮಾಡಿದ ಕಿವೀಸ್ ಆಟಗಾರರು ಭರ್ಜರಿ ಪ್ರದರ್ಶನ ತೋರುವ ಮೂಲಕ ಟೀಂ ಇಂಡಿಯಾಗೆ ನಡುಕು ಹುಟ್ಟಿಸಿದ್ದರು, ಆದರೆ ಬೌಲರ್‌ಗಳು ಕಿವೀಸ್ ಆಟಕ್ಕೆ ಬ್ರೇಕ್ ಹಾಕುವಲ್ಲಿ ಯಶಸ್ವಿಯಾದರು. ಆದರೂ ನಂತರ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಕಿವೀಸ್ ಬೌಲರ್‌ಗಳ ಮುಂದೆ ಮಂಕಾದರು.

india

ಕೊಹ್ಲಿ ವಾಗ್ವಾದ
ಮೊದಲ ವಿಕೆಟ್‌ಗೆ ಮಾರ್ಟಿನ್ ಗುಪ್ಟಿಲ್ ಮತ್ತು ಹೆನ್ರಿ ನಿಕಲಸ್ ಉತ್ತಮ ಜತೆಯಾಟವಾಡಿದ್ದರು. ಆದರೆ ಈ ಜೋಡಿಯನ್ನು ಸ್ಪಿನ್ನರ್ ಯಜುವೇಂದ್ರ ಚಾಹಲ್ ಮುರಿದರು. ನಿಕಲಸ್ ೪೧ ರನ್ ಗಳಿಸಿದ್ದಾಗ ಚಾಹಲ್ ಎಲ್‌ಬಿ ಬಲೆಗೆ ಬಿದ್ದರು. ಆದರೆ ಈ ತೀರ್ಪನ್ನು ಕೆಲ ಹೊತ್ತು ಪರಾಮರ್ಶೆ ನಡೆಸಿದ ನಂತರ ನಿಕಲಸ್ ಡಿಆರ್‌ಎಸ್ ಗೆ ಮನವಿ ಸಲ್ಲಿಸಿದರು. ಅವಧಿ ಮುಗಿದ ಬಳಿಕ ನಿಕಲಸ್ ಡಿಆರ್‌ಎಸ್‌ಗೆ ಮನವಿ ಸಲ್ಲಿಸಿದ್ದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೆಂಗಣ್ಣಿಗೆ ಗುರಿಯಾಯಿತು. ಹೀಗಾಗಿ ಅವರು ಅಂಪಾಯರ್ ಜತೆ ಈ ಬಗ್ಗೆ ವಾಗ್ವಾದ ನಡೆಸಿದರು. ಹಾಗಿದ್ದರೂ ಡಿಆರ್‌ಎಸ್‌ನಲ್ಲಿ ನ್ಯೂಜಿಲೆಂಡ್ ಗೆ ಯಶಸ್ಸು ಸಿಗಲಿಲ್ಲ.

Leave a Comment