ಧಾರವಾಡ, ಆ 2-  ಶಿಕ್ಷಣವೆಂದರೆ ಪ್ರಶ್ನೋತ್ತರವಲ್ಲ, ಮಕ್ಕಳ ಉಜ್ವಲ ಭವಿಷ್ಯವನ್ನು ಅಪೇಕ್ಷಿಸುವ ಸರಕಾರ, ಇತ್ತೀಚೆಗೆ ತೆರೆದ ಪುಸ್ತಕ ಪರೀಕ್ಷೆ ಕುರಿತ ಹೇಳಿಕೆ ಒಪ್ಪುವಂತದ್ದಲ್ಲ ಎಂದು ಗದಗ ಜಿಲ್ಲೆ ಮುಂಡರಗಿ ತಾಲೂಕಿನ ‘ಎಳೆಯರ ಗೆಳೆಯ’ ಮಾಸ ಪತ್ರಿಕೆ ಸಂಪಾದಕ ಹಾಗೂ ವಿದ್ಯಾರ್ಥಿ ಕು. ಮಹಾಗಣಪತಿ ಬಿಳಿಮಗ್ಗದ ಅಭಿಪ್ರಾಯಪಟ್ಟರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘದ ಮಕ್ಕಳ ಮಂಟಪವು ಚನ್ನಮ್ಮ ಕಿತ್ತೂರಿನ ರಾಜಗುರು ಸಂಸ್ಥಾನ ಕಲ್ಮಠದ ಚಂದರಗಿ ಸಭಾಂಗಣದಲ್ಲಿ ಆಯೋಜಿಸಿದ್ದ, ಮಕ್ಕಳ ಮಂಟಪದ ಪ್ರಸಕ್ತ ಅವಧಿಯ ಕಾರ್ಯಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ವಿದ್ಯಾವರ್ಧಕ ಸಂಘ ಕರ್ನಾಟಕ ಏಕೀಕರಣಗೊಳ್ಳುವಲ್ಲಿ ದೊಡ್ಡ ಪಾತ್ರ ವಹಿಸಿದ್ದು, ಹೊಸಗನ್ನಡದ ದಿಕ್ಕು ಬದಲಿಸುವಲ್ಲಿ ತನ್ನದೇ ಆದ ಪಾತ್ರ ವಹಿಸಿದೆ.  ಉತ್ತರ ಕರ್ನಾಟಕ ಅಭಿವೃದ್ಧಿಯಲ್ಲಿ ನಿರ್ಲಕ್ಷಕ್ಕೆ ಒಳಗಾಗಿದೆ ಎಂದು ಪ್ರತ್ಯೇಕ ರಾಜ್ಯ ಕೂಗು ಬೇಡ. ಅಖಂಡ ಕರ್ನಾಟಕವಾಗಿ ಉತ್ತರ ಕರ್ನಾಟಕ ಅಭಿವೃದ್ಧಿ ಹೊಂದಬೇಕು ಮತ್ತು ಕರ್ನಾಟಕ ಏಕೀಕರಣದ ಆಶಯ ವ್ಯರ್ಥವಾಗದಂತೆ ನೋಡಿಕೊಳ್ಳುವುದು ನಮ್ಮ ಮೇಲಿದೆ ಎಂದ ಅವರು, ಮಕ್ಕಳ ಮಂಟಪದ ಮೂಲಕ ಚಿಕ್ಕವನಾದ ನನ್ನನ್ನು ಗುರತಿಸಿ, ನನಗೆ ವೇದಿಕೆ ಕಲ್ಪಿಸಿಕೊಟ್ಟದ್ದು ಅವೀಸ್ಮರಣಿಯ ಘಟನೆ ಎಂದು ಹೇಳಿ ಸಂಘಕ್ಕೆ ಕೃತಜ್ಞತೆ ಸಲ್ಲಿಸಿದರು.
ಅತಿಥಿಗಳಾಗಿ ಕ.ವಿ.ವ. ಸಂಘದ ಕೋಶಾಧ್ಯಕ್ಷ ಕೃಷ್ಣ ಜೋಶಿ ಮಾತನಾಡಿ, ವೀರಭೂಮಿ, ಪುಣ್ಯಭೂಮಿ, ಕ್ರಾಂತಿಯ ಭೂಮಿ, ಬ್ರಿಟೀಷರ ವಿರುದ್ಧ ಹೋರಾಡಿದ ಚೆನ್ನಮ್ಮನ ನಾಡು ಕಿತ್ತೂರು. ಸ್ವಾಭಿಮಾನದ ಕಿಚ್ಚನ್ನು ಮಕ್ಕಳು ಬೆಳೆಸಿಕೊಂಡು, ಪ್ರಾಮಾಣಿಕವಾಗಿ ಜೀವನದಲ್ಲಿ ಮುಂದೆ ಬಂದಾಗ ಯಶಸ್ಸು ನಿಮ್ಮನ್ನು ಹಿಂಬಾಲಿಸುತ್ತದೆ. ದೇಶವು ನನಗೆ ಏನು ಕೊಟ್ಟಿದೆ ಎನ್ನದೇ ದೇಶಕ್ಕಾಗಿ ನಾನು ಏನು ಮಾಡಬಲ್ಲೆ ಎನ್ನುವ ಗುರಿಯಿಟ್ಟುಕೊಳ್ಳಬೇಕು ಎಂದರು.
ಸಾನಿಧ್ಯ ವಹಿಸಿದ್ದ ಶ್ರೀ ಮ.ನಿ.ಪ್ರ. ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು ಮಾತನಾಡಿ, ದೇಶವು ಕೇವಲ ಭೌತಿಕ ಸಂಪತ್ತು ಹೆಚ್ಚಿಸಿದರೆ ಸಾಲದು. ಮಕ್ಕಳೆಂಬ ಜೀವಂತ ಸಂಪತ್ತನ್ನು ಹೆಚ್ಚಿಸುವುದು ಅಗತ್ಯವಾಗಿದೆ. ಮಕ್ಕಳೆ, ದೇಶದ ನಿಜವಾದ ಸಂಪತ್ತು. ವಿದ್ಯಾವರ್ಧಕ ಸಂಘ  ಕಲೆ, ಸಾಹಿತ್ಯ, ಸಂಸ್ಕøತಿಗೆ ತನ್ನದೆ ಆದ ಕೊಡುಗೆ ನೀಡುತ್ತಿದೆ. ಮಕ್ಕಳ ಬದುಕಿಗೆ ಮಾರ್ಗದರ್ಶನ ಚಿಂತನೆಯ ಮತ್ತು ಪ್ರೋತ್ಸಾಹದ ನಿಟ್ಟಿನಲ್ಲಿ ಮಕ್ಕಳ ಮಂಟಪದ ಮೂಲಕ ಪ್ರಸಕ್ತ ಅವಧಿಯ ಕಾರ್ಯಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಚನ್ನಮ್ಮನ ಕಿತ್ತೂರಿನಲ್ಲಿ ಹಮ್ಮಿಕೊಂಡಿರುವುದು ಸಾರ್ಥಕ ಹಾಗೂ ಶ್ಲಾಘನೀಯ.
ಅಧ್ಯಕ್ಷತೆ ವಹಿಸಿ ಸಂಘದ ಉಪಾಧ್ಯಕ್ಷ ನಿಂಗಣ್ಣ ಕುಂಟಿ ಮಾತನಾಡಿ, ಕನ್ನಡ ಭಾಷೆ ಶ್ರೀಮಂತ ಹಾಗೂ ಸುಂದರ ಭಾಷೆ. ಸರಳ ಶಬ್ದಗಳನ್ನು ಬಳಸಿ ಪದ್ಯಗಳ ರಚನೆ ಕುರಿತಂತೆ ಹೇಳಿ, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸವಾಗಬೇಕಾದರೆ ಶಾಲೆಯ ಇತರ ಚಟುವಟಿಕೆಗಳ ಜೊತೆಗೆ ಸಾಹಿತ್ಯದ ಒಲವು ಬೇಕು ಎಂದರು.
ಸಂಘದ ಕಾರ್ಯಕಾರ್ಯಕಾರಿ ಸಮಿತಿ ಸದಸ್ಯರಾದ  ವಿಶ್ವೇಶ್ವರಿ ಹಿರೇಮಠ, ಶ್ರೀ ಗುರುಸಿದ್ಧೇಶ್ವರ ಹೈಸ್ಕೂಲಿನ ಮುಖ್ಯಾಧ್ಯಾಪಕರಾದ ಸಿ.ವಾಯ್. ಫರೀಟ ಮಾತನಾಡಿದರು.  ಖ್ಯಾತ ಜಾನಪದ ಕಲಾವಿದ ಬಸವಲಿಂಗಯ್ಯ ಹಿರೇಮಠ ‘ಬಿತ್ತರದಲಿ ಭೋರೆನುತಿದೆ ಶೌರ್ಯದ ಹೊಳೆಹುಚ್ಚು’ ಪದವನ್ನು ಹಾಡಿ, ಮಕ್ಕಳ ಮನಸ್ಸನ್ನು ಸೋರೆಗೊಂಡರು.  ಶಕುಂತಲಾ ವೀ. ಗಡಗಿ ಪ್ರೌಢ ಶಾಲೆಯ ವಿದ್ಯಾರ್ಥಿನಿಯರಾದ  ಶ್ರೀನಿಧಿ ನಾಯ್ಕ, ವಿನಿತಾ ನವಲೂರ, ಅಂಜಲಿ, ಪೂರ್ವಿ, ವಿಜಯಲಕ್ಷ್ಮೀ, ರಕ್ಷಿತಾ ಅವರಿಂದ ಸಮೂಹ ನೃತ್ಯ ಸೊಗಸಾಗಿ ಪ್ರದರ್ಶನಗೊಂಡಿತು. ಮಕ್ಕಳ ಮಂಟಪ ಸಲಹಾ ಸಮಿತಿ ಸದಸ್ಯರಾದ ಸಿ.ಎಸ್. ನಾಗಶೆಟ್ಟಿ, ಶಶಿಭೂಷಣ ದೊಡವಾಡ, ಮಹಾಲಕ್ಷ್ಮೀ ಪೂಜಾರ, ಬಸಪ್ಪ ಶೆಲ್ಲಿಕೇರಿ ಅತಿಥಿಗಳನ್ನು ಗೌರವಿಸಿದರು.
ಪ್ರಾರಂಭದಲ್ಲಿ ಎಂ.ಕೆ. ಹುಬ್ಬಳ್ಳಿಯ ಶ್ರೀ ಕಲ್ಮೇಶ್ವರ ಸಂ.ಪ.ಪೂ ಕಾಲೇಜಿನ ಶಿಕ್ಷಕ ಬಾಬು ಭಜಂತ್ರಿ ಮತ್ತು ಸಂಗಡಿಗರಿಂದ ವಚನ ಗಾಯನ ಹಾಗೂ ವಿದ್ಯಾರ್ಥಿನಿಯರಿಂದ ನಾಡಗೀತೆ ಜರುಗಿತು. ಚನ್ನಮ್ಮ ಕಿತ್ತೂರಿನ ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷರಾದ ಡಾ. ಶೇಖರ ಹಲಸಗಿ ಸ್ವಾಗತಿಸಿದರು. ಮಕ್ಕಳ ಮಂಟಪ ಸಂಚಾಲಕ ಶಿವಾನಂದ ಭಾವಿಕಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಲಹಾ ಸಮಿತಿ ಸದಸ್ಯರಾದ ವೀರಣ್ಣ ಒಡ್ಡೀನ ನಿರ್ವಹಿಸಿದರು. ಶಿಕ್ಷಕರಾದ ಸಿ.ಎಂ. ದೇಶನೂರ ವಂದಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು, ಶಿಕ್ಷಕರು ಸೇರಿದಂತೆ ಅನೇಕರು ಭಾಗವಹಿಸಿದ್ದರು.

Leave a Comment