ಅಮೆರಿಕಾ ಸೇನೆಗೆ ಬಾಹ್ಯಾಕಾಶ ಪಡೆ

ಜಗತ್ತಿನಲ್ಲಿ ಅತಿ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿರುವ ಅಮೆರಿಕಾ ಸೇನೆಗೆ ಬಾಹ್ಯಾಕಾಶದಿಂದಲೂ ಬೆಂಬಲ ಪಡೆಯುವ ಮೂಲಕ ವಿಶ್ವದಲ್ಲಿ ಸೇನೆಯನ್ನು ಇನ್ನಷ್ಟು ಶಕ್ತಿಶಾಲಿಯನ್ನಾಗಿಸಲು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಬಾಹ್ಯಾಕಾಶ ಪಡೆ ರಚನೆಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಈ ಪಡೆಯನ್ನು ಅಮೆರಿಕಾ ಸೇನೆಯ ೬ನೇ ಪಡೆಯನ್ನಾಗಿ ಮಾಡುವುದು ಟ್ರಂಪ್ ರ ಮೂಲ ಉದ್ದೇಶವಾಗಿದೆ.

ಅಮೆರಿಕಾದ ಸೇನಾ ಪಡೆಗಳ ೬ನೇ ವಿಭಾಗವಾಗಿ ಬಾಹ್ಯಾಕಾಶ ಪಡೆಯನ್ನು ಬಲಗೊಳಿಸಲು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಮುಂದಾಗಿದ್ದಾರೆ. ಅಮೆರಿಕಾ ಸೇನಾ ಪಡೆಗಳಿಗೆ ಕಾರ್ಯಾಚರಣೆ ಸಂದರ್ಭದಲ್ಲಿ ಅಗತ್ಯವಿರುವ ಮಾಹಿತಿಯನ್ನು ಬಾಹ್ಯಾಕಾಶದಿಂದ ಪಡೆಯುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದ್ದು, ಈ ಕುರಿತಂತೆ ಅಧ್ಯಕ್ಷ ಟ್ರಂಪ್ ಅಲ್ಲಿಯ ರಾಷ್ಟ್ರೀಯ ಬಾಹ್ಯಾಕಾಶ ಮಂಡಳಿಯೊಂದಿಗೆ ವ್ಯಾಪಕ ಚರ್ಚೆ ನಡೆಸಿದ್ದಾರೆ. ಈಗಿರುವ ಅಮೆರಿಕಾದ ವಾಯು ಪಡೆ ಬಾಹ್ಯಾಕಾಶ ಕಮಾಂಡ್ ಅನ್ನು ಇನ್ನಷ್ಟು ಬಲ ಪಡಿಸುವುದು, ಸೇನಾ ಕಾರ್ಯಾಚರಣೆ ವೇಳೆ ಈಗಿರುವ ಸೇನಾ ಉಪಗ್ರಹಗಳ ಮಾಹಿತಿ ವ್ಯವಸ್ಥೆಯನ್ನು ಇನ್ನಷ್ಟು ನಿಖರಗೊಳಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ.

ಮಹತ್ವಾಕಾಂಕ್ಷಿ ರಕ್ಷಣಾ ಯೋಜನೆಯಾದ ಬಾಹ್ಯಾಕಾಶ ಪಡೆ ಸನ್ನದ್ದತತೆಯ ಬಗ್ಗೆ ಅಮೆರಿಕಾದ ರಾಷ್ಟ್ರೀಯ ಬಾಹ್ಯಾಕಾಶ ಮಂಡಳಿಯೊಂದಿಗೆ ಇತ್ತೀಚೆಗೆ ಟ್ರಂಪ್ ಮಹತ್ವದ ಚರ್ಚೆ ನಡೆಸಿದ್ದಾರೆ. ೧೯೬೭ ರಲ್ಲಿ ರಚನೆಯಾಗಿರುವ ಅಮೆರಿಕಾದ ವಾಯು ಪಡೆಯನ್ನು ಬಾಹ್ಯಾಕಾಶ ತಂತ್ರಜ್ಞಾನದಿಂದಲೂ ಇನ್ನಷ್ಟು ಬಲಿಷ್ಠಗೊಳಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ. ಇದೇ ವರ್ಷ ಮಾರ್ಚ್ ತಿಂಗಳಿನಲ್ಲಿಯೇ ಈ ಯೋಜನೆಯ ರೂಪು ರೇಷೆ ಕುರಿತಂತೆ ರಕ್ಷಣಾ ಇಲಾಖೆ ಪ್ರಾಥಮಿಕ ಹಂತದ ಚರ್ಚೆಯನ್ನು ನಡೆಸಿ, ಅಧ್ಯಕ್ಷರಿಗೆ ವರದಿಯನ್ನು ನೀಡಿದೆ.

ಈಗಾಗಲೇ ಸೇನೆಯ ಉದ್ದೇಶಕ್ಕಾಗಿ ಬಾಹ್ಯಾಕಾಶದಲ್ಲಿ ಸಾಲು ಸಾಲಾಗಿ ಅಮೆರಿಕಾ ಉಪಗ್ರಹಗಳು ಇದ್ದರೂ ಈಗ ಹೊಸದಾಗಿ ಬಾಹ್ಯಾಕಾಶ ಪಡೆ ರಚನೆಯ ಅವಶ್ಯಕತೆ ಇದೆಯೇ ಎನ್ನುವ ಪ್ರಶ್ನೆಗಳಿಗೂ ಈ ಯೋಜನೆಯಲ್ಲಿ ಉತ್ತರವಿದೆ. ಜಗತ್ತಿನ ಇತ್ತೀಚಿನ ಸೇನಾ ಕಾರ್ಯಾಚರಣೆ ಅದಕ್ಕೆ ಬಳಸುವ ಅತ್ಯಾಧುನಿಕ ತಂತ್ರಜ್ಞಾನದ ಅಭಿವೃದ್ಧಿ ಹಿನ್ನೆಲೆಯಲ್ಲಿ ಈಗ ಭೂಮಿಯ ಮೇಲಿನ ರಕ್ಷಣಾ ಬೇಹುಗಾರಿಕೆ ರಾಡಾರ್ ಗಳ ಸಾಮರ್ಥ್ಯ ಏನೇನು ಸಾಲದು ಎನ್ನುವ ಮಟ್ಟಿಗೆ ಚೀನಾ, ರಷ್ಯಾದಂತಹ ರಾಷ್ಟ್ರಗಳು ಅತಿ ಹೆಚ್ಚು ಸಂಕೀರ್ಣ ಸೇನಾ ತಂತ್ರಗಾರಿಕೆ ಮತ್ತು ತಾಂತ್ರಿಕ ಸಾಮರ್ಥ್ಯವನ್ನು ಹೊಂದಿದೆ. ಇದನ್ನು ಮೆಟ್ಟಿ ನಿಲ್ಲುವ ಉದ್ದೇಶದಿಂದಲ್ಲೇ ಟ್ರಂಪ್ ಆಡಳಿತ ಹೊಸ ಬಾಹ್ಯಾಕಾಶ ಪಡೆಗೆ ಈಗ ಕೈಹಾಕಿದೆ.

೧೯೮೪ ರಿಂದ ಇಲ್ಲಿಯವರೆವಿಗೆ ಅಮೆರಿಕಾ ಉಡಾವಣೆ ಮಾಡಿರುವ ೧೮೦ಕ್ಕೂ ಹೆಚ್ಚು ಉಪಗ್ರಹಗಳಲ್ಲಿ ಅನೇಕ ಉಪಗ್ರಹಗಳು ಸೇನೆಯ ಉದ್ದೇಶಕ್ಕಾಗಿಯೇ ಉಡಾವಣೆ ಮಾಡಲಾಗಿದೆ. ಇತ್ತೀಚೆಗಷ್ಟೇ ಕ್ಷಿಪಣಿ ಪತ್ತೆ ಹಚ್ಚುವ ಯು.ಎಸ್.ಎ. ೨೮೨ ಉಪಗ್ರಹವನ್ನು ಉಡಾವಣೆ ಮಾಡಲಾಗಿದೆ. ಈ ಸೇನಾ ಬಳಕೆಗೆ ಇರುವ ಉಪಗ್ರಹಗಳು ಸೇನಾ ಕಾರ್ಯಾಚರಣೆ, ಹಾಗೂ ಉಪಗ್ರಹ ಉಡಾವಣೆಗಾಗಿ ಹವಾಮಾನ ಮುನ್ಸೂಚನೆ, ಶತೃ ರಾಷ್ಟ್ರಗಳ ಖಂಡಾತರ ಕ್ಷಿಪಣಿಗಳ ಮೇಲೆ ನಿಗಾ ವ್ಯವಸ್ಥೆ, ದಿಕ್ಸೂಚಿ ಮತ್ತು ಸಂಪರ್ಕ ವ್ಯವಸ್ಥೆಯನ್ನು ಅಮೆರಿಕಾ ಪಡೆಗಳಿಗೆ ಒದಗಿಸುತ್ತಿವೆ. ಈಗ ಕಾರ್ಯಾ ನಿರ್ವಹಿಸುತ್ತಿರುವ ಉಪಗ್ರಹಗಳ ಕಾರ್ಯಾಚರಣೆಗೆ ಯಾವುದೇ ರಾಷ್ಟ್ರ ಅಡ್ಡಿ ಪಡಿಸಲು ಸಾಧ್ಯವಾಗದಂತಹ ವ್ಯವಸ್ಥೆಯು ಈ ಉಪಗ್ರಹಗಳ ನಿಯಂತ್ರಣ ವ್ಯವಸ್ಥೆಯಲ್ಲಿ ಅಳವಡಿಸಲಾಗಿದೆ.

೧೯೮೨ ರಲ್ಲಿ ಅಮೆರಿಕಾದ ವಾಯು ಪಡೆ ಬಾಹ್ಯಾಕಾಶ ಕಮಾಂಡ್ (ಎ.ಎಫ್.ಎಸ್.ಪಿ.ಸಿ) ರಚಿಸಿತು. ಈ ಕಮ್ಯಾಂಡ್ ನ ಮುಖ್ಯ ಉದ್ದೇಶ ಬಾಹ್ಯಾಕಾಶ ಮತ್ತು ಸೈಬರ್ ಸಾಮರ್ಥ್ಯವನ್ನು ಸೇನೆಗೆ ಒದಗಿಸುವುದಾಗಿದೆ. ಇದರ ಜೊತೆಗೆ ಉಪಗ್ರಹಗಳಿಗೆ ನಿರ್ದೇಶನ ನೀಡುವ ನಿಯಂತ್ರಿಸುವುದು, ಅಮೆರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಉಪಗ್ರಹಗಳ ಉಡಾವಣೆಗಾಗಿ ಸೂಕ್ತ ಹವಾಮಾನ ಹಾಗೂ ಬಾಹ್ಯಾಕಾಶದಲ್ಲಿ ತೇಲಾಡುವ ಕಸ ತುಣುಕುಗಳು ಬಡಿಯದಂತೆ ತಡೆಯುವ ಮಾಹಿತಿಯನ್ನು ಒದಗಿಸುತ್ತಿದೆ.

ಉತ್ತನೂರು ವೆಂಕಟೇಶ್

Leave a Comment