180 ಬಿಎಂಟಿಸಿ ಬಸ್ ಸಂಚಾರ

ಬೆಂಗಳೂರು, ಮಾ. ೨೬- ನಗರದಲ್ಲಿ ಬಿಎಂಟಿಸಿ ಸ್ವಲ್ಪ ಮಟ್ಟಿಗೆ ಬಸ್‌ಗಳ ಸೇವೆಯನ್ನು ಆರಂಭಿಸಿದ್ದರೂ ಸಾರ್ವಜನಿಕರಿಗೆ ಮಾತ್ರ ಪ್ರಯಾಣವನ್ನು ನಿಷೇಧಿಸಿದೆ. ಅಗತ್ಯ ಸೇವೆಯಡಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಷ್ಟೇ ಬಸ್‌ನಲ್ಲಿ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.
ಲಾಕಡೌನ್ ನಡುವೆಯೂ ನಗರದಲ್ಲಿ ಅಗತ್ಯ ಸೇವಾ ಸಿಬ್ಬಂದಿಗಳನ್ನು ಕರೆದೊಯ್ಯಲು ಬಿಎಂಟಿಸಿ ಇಂದಿನಿಂದ 180 ಬಸ್‌ಗಳನ್ನು ಬಿಡಲು ನಿರ್ಧರಿಸಿದೆ. ಮೆಜೆಸ್ಟಿಕ್‌ನಿಂದ ವಿಕ್ಟೋರಿಯಾ ಕಿಮ್ಸ್, ಜಯದೇವ, ನಿಮ್ಹಾನ್ಸ್, ಕಿದ್ವಾಯಿ, ಪೊರ್ಟೀಸ್, ಅಪೊಲೊ, ಸಾಗರ್ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ಆರೋಗ್ಯ ಸೇವಾ ಸಿಬ್ಬಂದಿಗಳನ್ನು ಕರೆದೊಯ್ಯಲು ಬಿಎಂಟಿಸಿ ಬಸ್ ಸೇವೆ ಆರಂಭಿಸಲಾಗಿದೆ.
ಬಿಎಂಟಿಸಿ ಬಸ್ ಸೇವೆ ಆರಂಭವಾಗಿದೆ ಎಂಬ ಮಾತ್ರಕ್ಕೆ ಸಾರ್ವಜನಿಕರು ಈ ಬಸ್ ಹತ್ತುವಂತಿಲ್ಲ. ಅಗತ್ಯ ಸೇವೆಯಡಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಬೆಂಗಳೂರು ನಗರ ಪೊಲೀಸರು ಒದಗಿಸಿದ ಪಾಸ್ ಇದ್ದರಷ್ಟೇ ಕರೆದೊಯ್ಯಲು ಅನುಮತಿ ನೀಡಲಾಗಿದೆ.
ಪೊಲೀಸ್ ಇಲಾಖೆ ನೀಡಿರುವ ಕರ್ಫ್ಯೂ ಪಾಸ್ ಜೊತೆಗೆ ತಮ್ಮ ಕಛೇರಿಯ ಪಾಸ್ ತೋರಿಸುವುದು ಕಡ್ಡಾಯ. ಇಲ್ಲದಿದ್ದರೆ ಬಿಎಂಟಿಸಿ ಬಸ್ ಹತ್ತುವಂತಿಲ್ಲ. ಒಂದು ಬಸ್‌ಗೆ 20 ಪ್ರಯಾಣಿಕರನ್ನು ಮಾತ್ರವೇ ಹತ್ತಿಸಿಕೊಳ್ಳಲು ಸೂಚನೆ ನೀಡಲಾಗಿದೆ.

ಇವರಿಗೆಷ್ಟೇ ಬಸ್ ಸೇವೆ ಮಾತ್ರ
ಬೆಸ್ಕಾಂ, ಒಳಚರಂಡಿ ಮಂಡಳಿ, ಬಿಬಿಎಂಪಿ, ಪೊಲೀಸ್, ವೈದ್ಯರು, ತರಕಾರಿ ಮತ್ತು ಖಾಸಗಿ, ಔಷಧಾಲಯ ಭದ್ರತಾ ಸಿಬ್ಬಂದಿ, ರಕ್ತದಾನಿಗಳು, ಪತ್ರಕರ್ತರು, ಬ್ಯಾಂಕ್, ಇವರಿಗೆ ಬಸ್ ಸೇವೆಯನ್ನು ಒದಗಿಸಲಾಗಿದೆ. ದಿನದ 24 ಗಂಟೆ ದಿನಸಿ ಅಂಗಡಿ ಬಾಗಿಲು ತೆರೆಯಲು ಅವಕಾಶವನ್ನು ಕೂಡ ಕಲ್ಪಿಸಲಾಗಿದೆ. ಪೊಲೀಸ್‌ರಿಂದ ಸಿಬ್ಬಂದಿಗಳು ಪಾಸ್ ಪಡೆಯಲು ಕಛೇರಿಯ ಐಡಿ ಕಾರ್ಡ್ ಜೆರಾಕ್ಸ್, ಪ್ರತಿ ಪೋಟೋ ಕಛೇರಿಯ ಮೇಲಾಧಿಕಾರಿಗಳು ಸಹಿ ಮಾಡಿರುವ ಪತ್ರ ನೀಡಿದರೆ ಸಾಕು. ಡಿಸಿಪಿ ಕಛೇರಿಗಳಲ್ಲಿ ಪಾಸ್ ಪಡೆದುಕೊಳ್ಳಬಹುದು.

Leave a Comment