1750 ಕೋ. ರೂ. ಮೌಲ್ಯದ ಜಮೀನು ವಶ

ಬೆಂಗಳೂರು, ಡಿ.೭- ನಗರದ ಶ್ರೀಗಂಧ ಕಾವಲ್ ಹೇರೊಹಳ್ಳಿ, ಗಿಡ್ಡದ ಕೋನೆನಹಳ್ಳಿ, ಗ್ರಾಮದಲ್ಲಿ ಸರ್ಕಾರಕ್ಕೆ ಸೇರಿದ 1,750 ಕೋಟಿ ರೂಪಾಯಿ ಮೌಲ್ಯದ 354 ಎಕರೆ ಜಮೀನನ್ನು ನಗರದ ಜಿಲ್ಲಾಡಳಿತ ಇಂದು ತನ್ನ ವಶಕ್ಕೆ ಪಡೆದಿದೆ.

ಸುಂಕದ ಕಟ್ಟೆಯಲ್ಲಿರುವ ಚಮನ್ ಲಾಲ್ ಸೇವಾ ಟ್ರಸ್ಟ್ ಸ್ವಾಧೀನದಲ್ಲಿದ್ದ ಸರ್ಕಾರಿ ಭೂಮಿಯನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಕಳೆದ 50 ವರ್ಷಗಳಿಂದ ಸರ್ಕಾರಕ್ಕೆ ಸೇರಿದ ಜಮೀನು ಭೂ ನ್ಯಾಯ ಮಂಡಳಿ ಮತ್ತು ಹೈಕೋರ್ಟ್‌ನಲ್ಲಿ ವ್ಯಾಜ್ಯ ನಡೆಯುತ್ತಿದ್ದು, ಅಂತಿಮವಾಗಿ ತೀರ್ಪು ಬಂದಿದ್ದರಿಂದ ಈ ಭೂಮಿಯನ್ನು ಜಿಲ್ಲಾಡಳಿತದ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಸರ್ಕಾರಕ್ಕೆ ಸೇರಿದ್ದು ಎಂದು ನಾಮಫಲಕ ಅಳವಡಿಸಿದರು. ಭೂಮಿಯನ್ನು ವಶಕ್ಕೆ ಪಡೆಯುವ ವೇಳೆ ಹಾಜರಿದ್ದ ಬೆಂಗಳೂರು ನಗರ ಜಿಲ್ಲಾಧಿಕಾರಿ ಬಿ.ಶಂಕರ್ ಅವರು 1,750 ಕೋಟಿ ಯಿಂದ 2,000 ಕೋಟಿ ರೂಪಾಯಿ ಬೆಲೆಬಾಳುವ 354 ಎಕರೆ ಜಮೀನನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಈ ಜಮೀನಿನ 39 ಎಕರೆಯಲ್ಲಿ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ಅವುಗಳನ್ನು ಸದ್ಯಕ್ಕೆ ತೆರವುಗೊಳಿಸುವುದಿಲ್ಲ. ಆದರೆ ಕಾನೂನು ಪ್ರಕಾರ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

ಇಲ್ಲಿರುವ ದೇವಾಸ್ಥಾನವನ್ನು ಮುಜರಾಯಿ ಇಲಾಖೆ ವಶಕ್ಕೆ ಒಪ್ಪಿಸಲಾಗುವುದು ಎಂದು ತಿಳಿಸಿದ, ನಗರದ ಜಿಲ್ಲಾಧಿಕಾರಿಗಳು 36 ಎಕರೆ ಬಿ ಖರಾಬು ಜಮೀನು ಇದ್ದು, ಸಾರ್ವಜನಿಕರ ಉಪಯೋಗಕ್ಕೆ ಬಳಸಲಾಗುವುದು ಎಂದು ಹೇಳಿದರು.

Leave a Comment