17ನೇ ಲೋಕಸಭಾ ಸದಸ್ಯರಾಗಿ ಸೋನಿಯಾ, ಮೇನಕಾ, ಹೇಮಮಾಲಿನಿ ಪ್ರಮಾಣವಚನ

ನವದೆಹಲಿ, ಜೂ 18 – ಯುಪಿಎ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಬಿಜೆಪಿ ಸಂಸದೆ ಮೇನಕಾ ಗಾಂಧಿ ಹಾಗೂ ಮಥುರಾ ಸಂಸದೆ ಹೇಮಾಮಾಲಿನಿ ಸೇರಿದಂತೆ ಇತರ ಮಹಿಳಾ ಸಂಸದರು ಮಂಗಳವಾರ ಸಂಸತ್ತಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಸೋನಿಯಾ ಗಾಂಧಿ ಅವರು ಪ್ರಮಾಣವಚನ ಸ್ವೀಕರಿಸಿದಾಗ ಕಾಂಗ್ರೆಸ್, ಡಿಎಂಕೆ ಹಾಗೂ ತೃಣಮೂಲ ಕಾಂಗ್ರೆಸ್ ಸದಸ್ಯರು ಮೇಜು ಕುಟ್ಟಿ ಅಭಿನಂದಿಸಿದರು. ಕಾಂಗ್ರೆಸ್ ಅಧ್ಯಕ್ಷ ಹಾಗೂ ಸೋನಿಯಾ ಪುತ್ರ ರಾಹುಲ್ ಗಾಂಧಿ ಅವರು ಈ ಮಂದಸ್ಮಿತರಾಗಿ ಈ ದೃಶ್ಯವನ್ನು ಕಣ್ತುಂಬಿಕೊಂಡರು. ಕಾಂಗ್ರೆಸ್ ಪಕ್ಷದ ನೂತನ ನಾಯಕ ಅಧಿರ್ ರಂಜನ್ ಚೌಧರಿ ಎದ್ದು ನಿಂತು ಮೇಜು ಕುಟ್ಟುವ ಮೂಲಕ ಗೌರವ ತೋರಿದರು.
ನಂತರ, ಸುಲ್ತಾನಪುರದ ಸಂಸದೆ ಮೇನಕಾ ಗಾಂಧಿ ಪ್ರಮಾಣ ವಚನ ಸ್ವೀಕರಿಸಿದರು. ಪ್ರಮಾಣ ವಚನ ಸ್ವೀಕರಿಸಲು ವೇದಿಕೆ ಏರಿದ ಮೇನಕಾ, ತಮ್ಮ ಕನ್ನಡಕ ಮರೆತಿದ್ದರಿಂದ ಅದನ್ನು ಪಡೆಯಲು ತಮ್ಮ ಸ್ಥಾನಕ್ಕೆ ಹಿಂದಿರುಗಬೇಕಾಯಿತು. ಆಗ ಸದನದಲ್ಲಿ ಕೆಲ ಕಾಲ ತಿಳಿ ಹಾಸ್ಯದ ವಾತಾವರಣ ಸೃಷ್ಟಿಯಾಯಿತು. ನಂತರ, ಅವರ ಸಹೋದ್ಯೋಗಿ ಎಸ್. ಎಸ್. ಅಹ್ಲುವಾಲಿಯಾ ಮುಂದೆ ಬಂದು ಕನ್ನಡಕ ನೀಡಿದರು.
ನಂತರ, ಮೇನಕಾ, ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಔಪಚಾರಿಕ ಮಾತುಕತೆ ನಡೆಸಿದರು. ನಂತರ, ನಟಿ ಹಾಗೂ ರಾಜಕಾರಣಿ ಹೇಮಮಾಲಿನಿ ಪ್ರಮಾಣವಚನ ಸ್ವೀಕರಿಸಿದರು.
ಮಧ್ಯಾಹ್ನದ ನಂತರ, ಕೆಲ ಸಂಸದರು ಪ್ರಮಾಣವಚನ ಸ್ವೀಕರಿಸುವಾಗಿ ಘೋಷಣೆಗಳನ್ನು ಕೂಗಿದ್ದು ವಿವಾದಕ್ಕೂ ಕಾರಣವಾಯಿತು.
ಅನೇಕ ಬಿಜೆಪಿ ಸಂಸದರು, ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿದರು. ಸಂಸದೆ ಸಾಕ್ಷಿ ಮಹಾರಾಜ್ ಅವರು, ಅದರೊಂದಿಗೆ ಜೈ ಶ್ರೀ ರಾಮ್ ಎಂದು ಘೋಷಣೆ ಕೂಗಿದಾಗ, ಕೆಲ ಸದಸ್ಯರು ‘ಮಂದಿರ ಅಲ್ಲೇ ಕಟ್ಟುತ್ತೇವೆ’ ಎಂದು ಕೂಗಿದರು.
ಈ ನಡುವೆ ಸಮಾಜವಾದಿ ಪಕ್ಷದ ಸದಸ್ಯ ಶಫಿಕುರ್ ರೆಹಮಾನ್ ಬಾರ್ಕ್ ಅವರು ಘೋಷಣೆಗೆ ಬಿಜೆಪಿಯಲ್ಲಿ ಆಕ್ಷೇಪ ವ್ಯಕ್ತವಾಯಿತು. ಆದರೆ, ಅಧ್ಯಕ್ಷ ಸ್ಥಾನದಲ್ಲಿದ್ದ ಕೆ.ಸುರೇಶ್ ಅವರು ನಿರ್ಧಿಷ್ಟ ಹೇಳಿಕೆಗಳು ಮಾತ್ರ ಕಡತ ಸೇರುತ್ತವೆ ಎಂದು ಸ್ಪಷ್ಟಪಡಿಸಿದರಲ್ಲದೇ, ಸದನದ ಎರಡೂ ಪಕ್ಷಗಳಿಗೆ ಘೋಷಣೆಗಳನ್ನು ಕೂಗದಂತೆ ಮನವಿ ಮಾಡಿದರು.
ಚಿತ್ರನಟ ರವಿ ಕಿಶನ್ ಹಿಂದಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

Leave a Comment