16 ಬಾರಿ ಪೆಟ್ರೋಲ್ ಬೆಲೆ ಏರಿಕೆ ಕೇಂದ್ರದ ವಿರುದ್ಧ ಡಿಸಿಎಂ ಗರಂ

(ನಮ್ಮ ಪ್ರತಿನಿಧಿಯಿಂದ)
ತುಮಕೂರು, ಸೆ. ೫- ದೇಶದಲ್ಲಿ ದಿನದಿಂದ ದಿನಕ್ಕೆ ಪೆಟ್ರೋಲ್-ಡೀಸೆಲ್ ದರ ಹೆಚ್ಚಳವಾಗುತ್ತಿರುವುದನ್ನು ಖಂಡಿಸಿರುವ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು, ನರೇಂದ್ರಮೋದಿಯವರು ಪ್ರಧಾನಿಯಾದ ಬಳಿಕ 16ನೇ ಬಾರಿಗೆ ಪೆಟ್ರೋಲ್ ದರ ಹೆಚ್ಚಳವಾಗಿದೆ. ಇದು ಅವರ ಆಡಳಿತ ವೈಖರಿಯನ್ನು ತೋರಿಸುತ್ತದೆ ಎಂದು ಟೀಕಿಸಿದರು.
ತೈಲ ಉತ್ಪನ್ನ ರಾಷ್ಟ್ರಗಳಲ್ಲಿ ಪೆಟ್ರೋಲ್ ದರ ತೀರಾ ಕಡಿಮೆ ಇದೆ. ಹಾಗಾಗಿ ಭಾರತ ದೇಶದಲ್ಲೂ ದರ ಕಡಿಮೆಯಾಗಬೇಕು. ಆದರೆ ಕೇಂದ್ರ ಸರ್ಕಾರ ಬೆಲೆ ಕಡಿಮೆ ಮಾಡುತ್ತಿಲ್ಲ ಎಂದು ಅವರು ಆರೋಪಿಸಿದರು.
ನಗರದ ಹೊರವಲಯದಲ್ಲಿರುವ ಗಂಗಾಧರಯ್ಯ ಸ್ಮಾರಕ ಭವನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಳ್ಳುವ ಮುನ್ನ ವರದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಪೆಟ್ರೋಲ್-ಡೀಸೆಲ್ ದರ ಕಡಿಮೆ ಮಾಡದ ಕೇಂದ್ರ ಸರ್ಕಾರದ ಧೋರಣೆಯಿಂದಾಗಿ ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳುತ್ತಿದೆ. ಬೆಲೆ ಏರಿಕೆ ಬಿಸಿಯಿಂದ ಜನಸಾಮಾನ್ಯರು ತತ್ತರಿಸುವಂತಾಗಿದೆ ಎಂದರು.
ಪೆಟ್ರೋಲ್-ಡೀಸೆಲ್ ದರ ಹೆಚ್ಚಳವಾಗಿರುವುದರಿಂದ ರಾಜ್ಯ ಸಾರಿಗೆ ಸಂಸ್ಥೆ ಬಸ್‌ಗಳ ದರದಲ್ಲಿ ಹೆಚ್ಚಳವಾಗಲಿದೆ. ಈಗಾಗಲೇ ಸಾರಿಗೆ ಸಚಿವರು ಬಸ್ ಟಿಕೆಟ್ ದರ ಹೆಚ್ಚಳ ಮಾಡುವ ಪ್ರಸ್ತಾಪವನ್ನು ಸರ್ಕಾರದ ಮುಂದಿಟ್ಟಿದ್ದಾರೆ ಎಂದರು.
ಕೇಂದ್ರ ಸರ್ಕಾರ ಪೆಟ್ರೋಲ್-ಡೀಸೆಲ್ ಬೆಲೆ ಕಡಿಮೆ ಮಾಡದ ಹೊರತು ರಾಜ್ಯ ಸರ್ಕಾರ ಸೆಸ್ ಕಡಿಮೆ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
 ತನಿಖೆ ಅಂತಿಮ ಘಟ್ಟ
ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣದ ತನಿಖೆ ಅಂತಿಮ ಘಟ್ಟ ತಲುಪಿದೆ. ತನಿಖಾ ತಂಡ ಸಂಗ್ರಹಿಸಿದ ಸಾಕ್ಷ್ಯಾಧಾರರದ ಮೇಲೆ ಪ್ರಕರಣವನ್ನು ಬೇಧಿಸಲಾಗಿದೆ. ತನಿಖಾ ತಂಡಕ್ಕೆ ದೊರೆತಿರುವ ವಸ್ತುಗಳನ್ನು ಈಗಾಗಲೇ ವಿಧಿ ವಿಜ್ಞಾನ ಇಲಾಖೆ ಪರಿಶೀಲಿಸಿ ವರದಿ ನೀಡಿದೆ ಎಂದರು.
 ಮೈತ್ರಿ
ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಲವು ಸ್ಥಳೀಯ ಸಂಸ್ಥಗಳಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದು, ಅಧಿಕಾರದ ಗದ್ದುಗೆಗೇರಲು ಎಲ್ಲೆಲ್ಲಿ ಮೈತ್ರಿ ಅನಿವಾರ್ಯವಾಗಿದೆಯೋ ಅಂತಹ ಕಡೆ ಒಪ್ಪಂದದ ಪ್ರಕಾರ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡು ಆಡಳಿತ ಚುಕ್ಕಾಣಿ ಹಿಡಿಯಲಾಗುವುದು ಎಂದರು.

Leave a Comment