ಗೌರಿ ಹತ್ಯೆ ಆರೋಪಿ ನವೀನ್ ಮಂಪರು ಪರೀಕ್ಷೆಗೆ ಸಿದ್ದತೆ

ಬೆಂಗಳೂರು,ಮಾ.೧೪-ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ನವೀನ್‌ಕುಮಾರ್ ಅಲಿಯಾಸ್ ಹೊಟ್ಟೆ ಮಂಜನಿಗೆ ಮಂಪರು ಪರೀಕ್ಷೆ ನಡೆಸಲು ವಿಶೇಷ ತನಿಖಾ ತಂಡ(ಎಸ್‌ಐಟಿ) ಅಧಿಕಾರಿಗಳು ಸಿದ್ದತೆ ನಡೆಸಿದ್ದಾರೆ.

ನವೀನ್ ಅಲಿಯಾಸ್ ಹೊಟ್ಟೆ ಮಂಜನಿಗೆ ಅಥವಾ ಸುಳ್ಳು ಪತ್ತೆ ಪರೀಕ್ಷೆ ನಡೆಸಲು ಹೈಕೋರ್ಟ್ ಅನುಮತಿ ನೀಡಿರುವ ಹಿನ್ನಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು ವಿಧಿ ವಿಜ್ಞಾನ ಪ್ರಯೋಗಾಲಯ(ಎಫ್‌ಎಸ್‌ಎಲ್)ದ ಅಧಿಕಾರಿಗಳಿಗೆ  ಹೈಕೋರ್ಟ್ ಅನುಮತಿ ಪತ್ರವನ್ನು ಕಳುಹಿಸಿ ಮಂಪರು ಪರೀಕ್ಷೆಗೆ ಸಮಯ ನಿಗಧಿ ಮಾಡುವಂತೆ ಕೋರಿದ್ದಾರೆ.

ಈಗಾಗಲೇ ಎಫ್‌ಎಸ್‌ಎಲ್‌ನ ಅಧಿಕಾರಿಗಳಿಗೆ  ಹೈಕೋರ್ಟ್ ಅನುಮತಿ ಪತ್ರ ತಲುಪಿದ್ದು ಸದ್ಯದಲ್ಲೇ ನವೀನ್‌ನ ಮಂಪರು ಪರೀಕ್ಷೆ ನಡೆಸಿ ಪ್ರಕರಣದ ಸತ್ಯಾಸತ್ಯತೆಯನ್ನು ಪಡೆದುಕೊಳ್ಳಲಾಗುವುದು ಎಂದು ಎಸ್‌ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

ತನಿಖಾಧಿಕಾರಿಗಳ ಮನವಿ ಹಿನ್ನೆಲೆಯಲ್ಲಿ ನವೀನ್ ಮಂಪರು ಪರೀಕ್ಷೆ ನಡೆಸಲು ಕೋರ್ಟ್ ಒಪ್ಪಿಗೆ ನೀಡಿದೆ.ವೈಜ್ಞಾನಿಕವಾಗಿ ಮಂಪರು ಪರೀಕ್ಷೆ ಎಂದರೆ ಏನು? ಈ ಪರೀಕ್ಷೆ ನಡೆಸಿದರೆ ಆರೋಪಿ ಸತ್ಯ ಬಾಯಿ ಬಿಡುತ್ತಾನೆಯೇ  ಮಂಪರು ಪರೀಕ್ಷೆ ವೇಳೆ ಆರೋಪಿ ಬಾಯ್ಬಿಟ್ಟ ವಿಷಯಗಳನ್ನು ಕೋರ್ಟ್ ಪರಿಗಣನೆಗೆ ತೆಗೆದುಕೊಳ್ಳುತ್ತಾ ಎನ್ನುವ ಕುತೂಹಲಗಳು ಸಹಜ.

ಯಾರಿಗೆ ಮಂಪರು ಪರೀಕ್ಷೆ
ಅತ್ಯಂತ ಗಂಭೀರವಾದ ಪ್ರಕರಣಗಳಲ್ಲಿ ಆರೋಪಿಗಳು ಪೊಲೀಸರ ತನಿಖೆಗೆ ಸಹಕರಿಸದೇ ಇದ್ದಾಗ ಅಥವಾ ತಾನು ಮಾಡಿದ ಅಪರಾಧದ ಬಗ್ಗೆ ಏನನ್ನೂ ಹೇಳದೇ ಇದ್ದಾಗ, ಸತ್ಯ ತನಿಖಾಧಿಕಾರಿಗಳಿಗೆ ತಿಳಿಯದಂತೆ ಮರೆ ಮಾಚುತ್ತಿದ್ದರೆ, ತನಿಖೆಯನ್ನು ದಾರಿ ತಪ್ಪಿಸಲು ಯತ್ನಿಸುತ್ತಿದ್ದಾನೆ ಎಂದು ತನಿಖಾಧಿಕಾರಿಗಳಿಗೆ ಗೊತ್ತಾದರೆ ಆತನ ಮಂಪರು ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಲಾಗುತ್ತದೆ. ಒಬ್ಬ ಆರೋಪಿ ಈ ಕೃತ್ಯ ನಡೆಸಿದ್ದಾನೆ ಎಂದು ಬಲವಾದ ಅನುಮಾನಗಳಿದ್ದಾಗ ಮಂಪರು ಪರೀಕ್ಷೆ ಮಾಡಲಾಗುತ್ತದೆ.

ಮಂಪರು ಪರೀಕ್ಷೆ ಹೇಗೆ
ಆರೋಪಿ ನಿದ್ರಾವಸ್ಥೆಗೆ ಜಾರುವ ಮೊದಲನೇ ಹಂತದಲ್ಲಿ ಆತನನ್ನು ನಿದ್ದೆಗೆ ಜಾರದಂತಹ ಸ್ಥಿತಿಯಲ್ಲಿಟ್ಟು ಮೊದಲೇ ಸಿದ್ಧಪಡಿಸಿಟ್ಟುಕೊಂಡ ಪ್ರಶ್ನೆಗಳನ್ನು ಕೇಳಲಾಗುತ್ತದೆ. ವ್ಯಕ್ತಿಯ ಆರೋಗ್ಯ ಮತ್ತು ದೇಹ ಸಾಮರ್ಥ್ಯಕ್ಕನುಗುಣವಾಗಿ ಸೋಡಿಯಂ ಪೆಂಥೋಟೆಲ್ ಔಷಧವನ್ನು ಇಂಜೆಕ್ಷನ್ ಮೂಲಕ ನೀಡಲಾಗುತ್ತದೆ. ಈ ಇಂಜೆಕ್ಷನ್ ನೀಡಿದ ನಂತರ ಆರೋಪಿ ನಿದ್ರಾವಸ್ಥೆಗೆ ಜಾರುವ ಮೊದಲನೇ ಹಂತ ತಲುಪುತ್ತಾನೆ. ಆತ ಪೂರ್ಣ ನಿದ್ದೆಗೆ ಜಾರದಂತೆ ಮಾಡಿ ಆತನಿಂದ ಪ್ರಶ್ನೆಗಳಿಗೆ ಉತ್ತರ ಪಡೆಯಲಾಗುತ್ತದೆ.

ನಿದ್ರಾವಸ್ಥೆಯ ಮೊದಲ ಹಂತದಲ್ಲಿ ಯಾವುದೇ ವ್ಯಕ್ತಿ ಸಾಮಾನ್ಯವಾಗಿ ಸತ್ಯವನ್ನು ಹೇಳುತ್ತಾನೆ. ಸೋಡಿಯಂ ಪೆಂಥೋಟೆಲ್ ಔಷಧವು ಕೇಂದ್ರೀಯ ನರ ವ್ಯವಸ್ಥೆಯನ್ನು ತನ್ನ ನಿಯಂತ್ರಣಕ್ಕೆ ತಂದು ರಕ್ತದೊತ್ತಡವನ್ನು ಕಡಿಮೆಗೊಳಿಸಿ ಹೃದಯ ಬಡಿತವನ್ನು ನಿಧಾನಗೊಳಿಸುತ್ತದೆ. ಈ ಹಂತದಲ್ಲಿ ಆರೋಪಿಯನ್ನ ಅರೆ-ಪ್ರಜ್ಞಾವಸ್ಥೆಗೆ ತರುವ ಮೂಲಕ ಅವನ ಕಲ್ಪನಾ ಶಕ್ತಿಯನ್ನು ತಟಸ್ಥಗೊಳಿಸಿ ಆತನಿಂದ ಸತ್ಯವನ್ನು ಹೇಳಿಸಲಾಗಿತ್ತದೆ.

ಈ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಣ ಮಾಡಿಕೊಳ್ಳಲಾಗುತ್ತದೆ. ಸೋಡಿಯಂ ಪೆಂಥೋಟೆಲ್‌ಅನ್ನು ಹೆಚ್ಚು ಪ್ರಮಾಣದಲ್ಲಿ ನೀಡಿದರೆ ಆರೋಪಿ ಕೋಮಾಗೆ ಜಾರುವ ಸಾಧ್ಯತೆ ಇರುತ್ತದೆ. ವೈದ್ಯರು ಮತ್ತು ಮನಶಾಸ್ತ್ರಜ್ಞರಿಂದ ಈ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ವೇಳೆ ತನಿಖಾಧಿಕಾರಿಗಳಿಗೆ ಪ್ರವೇಶ ಇರುವುದಿಲ್ಲ. ಪ್ರಕರಣದ ಸಂಪೂರ್ಣ ವಿವರವನ್ನು ವೈದ್ಯರೊಂದಿಗೆ ತನಿಖಾಧಿಕಾರಿಗಳು ವಿವರವಾಗಿ ಚರ್ಚೆ ನಡೆಸಿ ವೈದ್ಯರ ಬಳಿ ಮೊದಲೇ ತಮಗೆ ಯಾವ್ಯಾವ ಪ್ರಶ್ನೆಗಳಿಗೆ ಉತ್ತರ ಬೇಕು ಎನ್ನುವುದನ್ನು ತಿಳಿಸುತ್ತಾರೆ.

ಅನುಮತಿ ಕಡ್ಡಾಯ
ಯಾವುದೇ ಪ್ರಕರಣದಲ್ಲಿ ಆರೋಪಿಯ ಮಂಪರು ಪರೀಕ್ಷೆಗೆ ಕೋರ್ಟ್ ಅನುಮತಿಯನ್ನು ಪಡೆದುಕೊಳ್ಳುವುದು ಕಡ್ಡಾಯ. ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಅದಕ್ಕೆ ಪೂರಕವಾಗಿ ದಾಖಲೆಗಳನ್ನು ಸಲ್ಲಿಸಬೇಕು. ಯಾಕೆ ಈ ವ್ಯಕ್ತಿಗೆ ಮಂಪರು ಪರೀಕ್ಷೆ ಅಗತ್ಯ ಇದೆ ಅನ್ನೋದನ್ನ ನ್ಯಾಯಾಧೀಶರಿಗೆ ಮನವರಿಕೆ ಮಾಡಬೇಕು. ಈ ವೇಳೆ ಕೋರ್ಟ್ ಆರೋಪಿಯ ಅಭಿಪ್ರಾಯ ಪಡೆದು ಮಂಪರು ಪರೀಕ್ಷೆಗೆ ಅನುಮತಿ ನೀಡಬಹುದು ಅಥವಾ ನೀಡದೇ ಇರಲೂಬಹುದು.

ಆರೋಪಿ ಮಂಪರು ಪರೀಕ್ಷೆಯಲ್ಲಿ ನೀಡುವ ಹೇಳಿಕೆ ಕೋರ್ಟ್‌ನಲ್ಲಿ ಸಾಕ್ಷ್ಯವಾಗಿವುದಿಲ್ಲ. ಆತ ಮಂಪರು ಪರೀಕ್ಷೆಯಲ್ಲಿ ನೀಡಿದ ಹೇಳಿಕೆಗಳ ಆಧಾರದ ಮೇಲೆ ತನಿಖಾಧಿಕಾರಿಗಳು ಸಾಕ್ಷಿಗಳನ್ನು ಕಲೆಹಾಕಬೇಕಾಗುತ್ತದೆ. ಮಂಪರು ಪರೀಕ್ಷೆ ವೇಳೆ ಹೇಳಿದ ವಿಚಾರಗಳ ಬಗ್ಗೆ ಪೂರಕ ಸಾಕ್ಷಿ ಸಂಗ್ರಹಿಸಿ ಆರೋಪಿ ಕೃತ್ಯ ನಡೆಸಿರುವ ಕೃತ್ಯದ ಬಗ್ಗೆ ಮನವರಿಕೆ ಮಾಡಬೇಕು. ನೇರವಾಗಿ ಮಂಪರು ಪರೀಕ್ಷೆಯ ಹೇಳಿಕೆಯೇ ಕೋರ್ಟ್‌ನಲ್ಲಿ ಸಾಕ್ಷ್ಯವಾಗುವುದಿಲ್ಲ. ಮಂಪರು ಪರೀಕ್ಷೆಯಲ್ಲಿ ತಪ್ಪೊಪ್ಪಿಕೊಂಡು ಆ ನಂತರ ಕೇಸ್‌ನಿಂದ ಖುಲಾಸೆಯಾಗಿರುವ ಹಲವು ಪ್ರಕರಣಗಳಿವೆ.

ಹಲವರಿಗೆ ಮಂಪರು ಪರೀಕ್ಣೆ?
ಕರ್ನಾಟಕದಲ್ಲಿ ಛಾಪಾ ಕಾಗದ ಹಗರಣದ ಆರೋಪಿ ಕರೀಂ ಲಾಲ್ ತೆಲಗಿಗೆ ಮಂಪರು ಪರೀಕ್ಷೆ ನಡೆಸಲಾಗಿತ್ತು. ಮಂಗಳೂರಿನಲ್ಲಿ ನಡೆದಿದ್ದ ಕೊಲೆ ಪ್ರಕರಣವೊಂದರಲ್ಲಿ ಸೈನೈಡ್ ರಮೇಶ್,ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ನಡೆದಿದ್ದ ಸೌರಬ್ ರಸ್ತೋಗಿ ಕೊಲೆ ಪ್ರಕರಣದಲ್ಲಿ ಆತನ ಹೆಂಡತಿ ಅಂಕಿಶಾಗೆ ಮಂಪರು ಪರೀಕ್ಷೆ ನಡೆಸಲಾಗಿತ್ತು. ಇನ್ನು ರಾಷ್ಟ್ರೀಯ ಮಟ್ಟದಲ್ಲಿ ಮುಂಬೈ ದಾಳಿ ಆರೋಪಿ ಕಸಬ್, ಅರುಷಿ ಕೊಲೆ ಪ್ರಕರಣದಲ್ಲಿ ಆಕೆಯ ತಂದೆ, ತಾಯಿ ಮತ್ತು ಅನುಮಾನವಿದ್ದ ನೇಪಾಳ ಮೂಲದ ಯುವಕರಿಗೆ ಮಂಪರು ಪರೀಕ್ಷೆ ನಡೆಸಲಾಗಿತ್ತು. ಉಗ್ರಗಾಮಿ ಕೃತ್ಯಗಳನ್ನು ನಡೆಸಿ ಬಂಧನಕ್ಕೊಳಗಾಗಿರುವ ಉಗ್ರರಿಗೂ ಮಂಪರು ಪರೀಕ್ಷೆ ನಡೆಸಲಾಗಿದೆ.

Leave a Comment