150 ಮಂದಿ ಅಯ್ಯಪ್ಪ ಮಾಲಾಧಾರಿಗಳಿಂದ ಶಬರಿಮಲೆ ಯಾತ್ರೆ

ಹುಳಿಯಾರು, ಜ. ೧೨- ಪಟ್ಟಣದ ಶ್ರೀ ಅಯ್ಯಪ್ಪಸ್ವಾಮಿ ಸೇವಾ ಸಮಿತಿಯಿಂದ ಪ್ರಸಕ್ತ ವರ್ಷದ ಶಬರಿಮಲೈ ಯಾತ್ರೆ ಕೈಗೊಳ್ಳುವ ಅಂಗವಾಗಿ ಒಟ್ಟು 300 ಕ್ಕೂ ಹೆಚ್ಚು ಮಂದಿ 48 ದಿನಗಳು, 21 ದಿನಗಳು, 9 ದಿನಗಳ ವೃತದ ಮಾಲೆ ಧರಿಸಿದ್ದರು. ಇದರಲ್ಲಿ ಕಳೆದ ಕೆಲ ದಿನಗಳಿಂದ ನೂರಕ್ಕೂ ಹೆಚ್ಚು ಮಂದಿ ಮಂಡಲಪೂಜೆಗೆ ಹೋಗಿಬಂದಿದ್ದು, 145 ಕ್ಕೂ ಹೆಚ್ಚು ಮಂದಿ ಮಾಲಾಧಾರಿಗಳು ಜ್ಯೋತಿ ಪೂಜೆಗೆ ಶಬರಿಮಲೆಗೆ ತೆರಳಿದರು.

ಶ್ರೀ ಸ್ವಾಮಿಯವರಿಗೆ ವಿಶೇಷ ಪೂಜೆ, ಅಭಿಷೇಕ ಮುಂತಾದ ಪೂಜಾ ಕೈಂಕರ್ಯಗಳನ್ನು ನಡೆಸಿ ಜ್ಯೋತಿ ಪೂಜೆಗೆ ತೆರಳಲಿರುವ ಮಾಲಾಧಾರಿಗಳಿಗೆ ಗುರುಸ್ವಾಮಿಗಳಿಂದ ಇರುಮುಡಿ ಕಟ್ಟುವ ಸೇವೆ ನಡೆಸಲಾಯಿತು.

ನಂತರ ಮಂಗಳ ವಾದ್ಯಗಳೊಂದಿಗೆ ಇರುಮುಡಿ ಹೊತ್ತ ಮಾಲಾಧಾರಿಗಳು ಊರಿನ ಪ್ರಮುಖ ಬೀದಿಗಳಾದ ವಿವೇಕಾನಂದ ರಸ್ತೆ, ಎಸ್.ಆರ್.ಟಿ ರಸ್ತೆ, ಬ್ರಾಹ್ಮಣರ ಬೀದಿ, ಲಿಂಗಾಯಿತರ ಬೀದಿ, ದುರ್ಗಮ್ಮನ ದೇವಸ್ಥಾನ ಬೀದಿ, ಬಿ.ಎಚ್.ರಸ್ತೆಗಳಲ್ಲಿ ಪಾದಯಾತ್ರೆ ನಡೆಸಲಾಯಿತು.

ಶ್ರೀ ರಂಗನಾಥಸ್ವಾಮಿ, ಶ್ರೀ ಹುಳಿಯಾರಮ್ಮ, ಶ್ರೀ ದುರ್ಗಮ್ಮ, ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ ತರುವಾಯ ಕುಟುಂಬ ವರ್ಗದವರು, ಸಾರ್ವಜನಿಕರ ಶುಭ ಹಾರೈಕೆಯೊಂದಿಗೆ ಬೀಳ್ಕೊಡಲಾಯಿತು.

ಮಾಲಾಧಾರಿಗಳ ಪಾದಯಾತ್ರೆ ಯುದ್ದಕ್ಕೂ ಭಕ್ತಾದಿಗಳು ತಮ್ಮ ತಮ್ಮ ಮನೆಯ ಮುಂದೆ ನೀರು ಹಾಕಿ, ಬಣ್ಣ ಬಣ್ಣದ ರಂಗೋಲಿ ಬಿಟ್ಟು ಹೂವುಗಳಿಂದ ಸಿಂಗರಿಸಿ ಸ್ವಾಗದ ಕೋರಲಾಗಿತ್ತಲ್ಲದೆ ಮಾಲಾಧಾರಿಗಳಿಗೆ ಭಕ್ತಿ ಭಾವದಿಂದ ಪೂಜೆ ಸಲ್ಲಿಸಿ ಪಾದಗಳಿಗೆ ಎರಗಿ ನಮಸ್ಕರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

Leave a Comment