15 ದಿನಗಳ ಅಂತರದಲ್ಲಿ ಹಿಮಾದಾಸ್‌ಗೆ ನಾಲ್ಕನೇ ಚಿನ್ನ, ಅನಾಸ್‌ಗೆ ಅಗ್ರ ಸ್ಥಾನ

ನವದೆಹಲಿ, ಜು 18 – ಚಿನ್ನದ ಬೇಟೆ ಮುಂದುವರಿಸಿರುವ ಭಾರತದ ವೇಗದ ಓಟಗಾರ್ತಿ ಹಿಮಾ ದಾಸ್‌ ಅವರು ಬುಧವಾರ ನಡೆದ ಟ್ಯಾಬರ್ ಅಥ್ಲೆಟಿಕ್ಸ್ ಮೀಟ್‌ನಲ್ಲಿ ಮತ್ತೊಂದು ಚಿನ್ನದ ಪದಕ ತನ್ನ ಖಾತೆಗೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಆ ಮೂಲಕ ಕೇವಲ 15 ದಿನಗಳ ಅಂತರದಲ್ಲಿ ಹಿಮಾದಾಸ್‌ ನಾಲ್ಕನೇ ಸ್ವರ್ಣ ಪದಕ ಮುಡಿಗೇರಿಸಿಕೊಂಡಿದ್ದಾರೆ.

ಜೆಕ್‌ ಗಣರಾಜ್ಯದಲ್ಲಿ ನಡೆಯುತ್ತಿರುವ ಟ್ಯಾಬರ್ ಅಥ್ಲೆಟಿಕ್ಸ್ ಮೀಟ್‌ನ 200ಮೀ. ಓಟವನ್ನು ಭಾರತದ ಹಿಮಾ ದಾಸ್‌ ಅವರು 23.25 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸುವ ಮೂಲಕ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಭಾರತದ ಮತ್ತೊಬ್ಬ ಓಟಗಾರ್ತಿ ವಿಸ್ಮಯ ಅವರು 200 ಮೀ ಅಂತರವನ್ನು 23.43 ಸೆಕೆಂಡ್‌ಗಳಲ್ಲಿ ಕ್ರಮಿಸುವ ಮೂಲಕ ಬೆಳ್ಳಿ ಪದಕಕ್ಕೆ ಭಾಜನರಾಗಿದ್ದಾರೆ.

ಇನ್ನು ಪುರುಷರ ವಿಭಾಗದಲ್ಲಿ ಭಾರತದ ಮೊಹಮ್ಮದ್ ಅನಾಸ್‌ ಅವರು 400ಮೀ ಓಟವನ್ನು 45.40 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.  ಜುಲೈ 13 ರಂದು ಅನಾಸ್‌ ಕ್ಲಾಡ್ನೊ ಸ್ಪರ್ಧೆಯಲ್ಲೂ 400 ಮೀ. ಓಟವನ್ನು 45.21 ಸೆಕೆಂಡ್‌ಗಳಲ್ಲಿ ಮುಗಿಸಿ ಚಿನ್ನ ಗೆದ್ದಿದ್ದರು. ಇದೀಗ ಅವರು ಎರಡನೇ ಸ್ವರ್ಣ ಪದಕಕ್ಕೆ ಭಾಜನರಾಗಿದ್ದಾರೆ.

ಜುಲೈ 2 ರಿಂದ ಇದುವರೆಗೂ ಹಿಮಾದಾಸ್‌ ಒಟ್ಟು ನಾಲ್ಕು ಚಿನ್ನದ ಪದಕ ಗೆದ್ದಿದ್ದಾರೆ. ಯುರೋಪ್‌ನಲ್ಲಿ ನಡೆದಿದ್ದ ಸ್ಪರ್ಧೆಯಲ್ಲಿ ಮೊದಲ ಚಿನ್ನ ತಮ್ಮದಾಗಿಸಿಕೊಂಡಿದ್ದರು. ಇದೀಗ ಅವರು 200 ಮೀ ಓಟವನ್ನು 23.25 ಅಂತರದಲ್ಲಿ ಮುಗಿಸುವ ಮೂಲಕ ಮೊದಲ ಸ್ಪರ್ಧೆಯ ಓಟದ ಸಮಯವನ್ನು ಇನ್ನಷ್ಟು ಉತ್ತಮಪಡಿಸಿಕೊಂಡಿದ್ದಾರೆ. ಈ ಕುರಿತು ಹಿಮಾ ದಾಸ್ ಟ್ವಿಟ್‌ ಮಾಡಿದ್ದಾರೆ.

ಜುಲೈ 2ರಂದು ಪೊಲೆಂಡ್‌ನಲ್ಲಿ ನಡೆದಿದ್ದ ಪೊಜ್ನಾನ್‌ ಅಥ್ಲೆಟಿಕ್ಸ್‌ ಪ್ರಿಕ್ಸ್‌ನಲ್ಲಿ ಹಿಮಾದಾಸ್‌ ಅವರು 23.65 ಸೆಕೆಂಡ್‌ಗಳಲ್ಲಿ ಓಟವನ್ನು ಮುಗಿಸಿ ಮೊದಲ ಚಿನ್ನ ಗೆದ್ದಿದ್ದರು. ನಂತರ, ಜುಲೈ 8 ರಂದು ಕುಟ್ನೊ ಅಥ್ಲೆಟಿಕ್ಸ್‌ ಮೀಟ್‌ನಲ್ಲಿ ಅಸ್ಸಾಂ ಓಟಗಾರ್ತಿ 23.97 ಸೆಕೆಂಡ್‌ಗಳಲ್ಲಿ ಕ್ರಮಿಸಿ ಎರಡನೇ ಚಿನ್ನ ತಮ್ಮದಾಗಿಸಿಕೊಂಡಿದ್ದರು. ಜತೆಗೆ, ಕೇರಳ ಓಟಗಾರ್ತಿ ವಿಸ್ಮಯ ಅವರು 24.06 ಸೆಕೆಂಡ್‌ಗಳಲ್ಲಿ ಕ್ರಮಿಸಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದ್ದರು.

ಜುಲೈ 13 ರಂದು ಝೆಕ್‌ ಗಣರಾಜ್ಯದ ಕ್ಲಾಡ್ನೊ ಅಥ್ಲೆಟಿಕ್ಸ್‌ಮೀಟ್‌ನಲ್ಲಿ 200 ಮೀ ಸ್ಪರ್ಧೆಯಲ್ಲಿ 23.43 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸುವ ಮೂಲಕ ಮೂರನೇ ಚಿನ್ನದ ಪದಕ ಗೆದ್ದಿದ್ದರು.

Leave a Comment