13ನೇ ಐಪಿಎಲ್ ಆವೃತ್ತಿ ರದ್ದಾದರೆ ಹಲವರ ಕ್ರಿಕೆಟ್ ಬದುಕು ಕತ್ತಲು :ಆಕಾಶ್ ಚೋಪ್ರಾ

ನವದೆಹಲಿ, ಏ 2 -ಕೊರೊನಾ ವೈರಸ್‌ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ 13ನೇ ಆವೃತ್ತಿಯ ಟೂರ್ನಿ ರದ್ದಾಗುವ ಎಲ್ಲಾ ಸಾಧ್ಯತೆಗಳಿವೆ. ಜಗತ್ತಿನಾದ್ಯಂತ ಇಂದು ಕೋವಿಡ್‌-19 ಸೋಂಕಿತರ ಸಂಖ್ಯೆ 10 ಲಕ್ಷದ ಗಡಿ ಸಮೀಪಕ್ಕೆ ಕಾಲಿಟ್ಟಿದ್ದು, 47 ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಲಿ ತೆಗೆದುಕೊಂಡಿದೆ.
ಇಂತಹ ಕಠಿಣ ಸಂದರ್ಭದಲ್ಲಿ ವೈರಸ್‌ ಹರಡದಂತೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ವಿಶ್ವದಾದ್ಯಂತ ಎಲ್ಲಾ ಕ್ರೀಡಾ ಚಟುವಟಿಕೆಗಳನ್ನು ಮುಂದೂಡಲಾಗುತ್ತಿದ್ದು, ಬಹುತೇಕ ಸ್ಪರ್ಧೆಗಳನ್ನು ರದ್ದು ಪಡಿಸಲಾಗಿದೆ. ಇದೀಗ ರದ್ದು ಪಡಿಸಲಾದ ಕ್ರೀಡಾಕೂಟಗಳ ಸಾಲಿಗೆ ಐಪಿಎಲ್‌ 2020 ಟೂರ್ನಿಯೂ ಸೇರ್ಪಡೆಯಾಗುವ ಎಲ್ಲಾ ಸಾಧ್ಯತೆಗಳಿವೆ.

ಮಾರ್ಚ್ 29ರಂದು ಶುರುವಾಗಬೇಕಿದ್ದ 2020ರ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಏಪ್ರಿಲ್ 15ಕ್ಕೆ ಮುಂದೂಡಲಾಗಿದೆ. ಕೇಂದ್ರ ಸರಕಾರ ಬಿಡುಗಡೆ ಮಾಡುವ ನೂತನ ನಿರ್ದೇಶನದ ಬಳಿಕವಷ್ಟೇ ಈ ವರ್ಷ ಐಪಿಎಲ್‌ ನಡೆಸಬೇಕೋ ಬೇಡವೋ ಎಂದು ಬಿಸಿಸಿಐ ಅಂತಿಮ ತೀರ್ಮಾನ ಕೈಗೊಳ್ಳಲಿದೆ. ಒಂದು ವೇಳೆ ಈ ವರ್ಷ ಐಪಿಎಲ್‌ ರದ್ದಾದರೆ ಬಿಸಿಸಿಐಗಂತೂ ಸಾವಿರಾರು ಕೋಟಿ ರೂ.ಗಳ ಭಾರಿ ನಷ್ಟ ಸಂಭವಿಸಲಿದೆ.

ಇನ್ನು ಆಟಗಾರರ ದೃಷ್ಠಿಯಿಂದ ಹೇಳುವುದಾದರೆ, ಐಪಿಎಲ್‌ನಲ್ಲಿ ಮಿಂಚುವ ಮೂಲಕ ಮುಂಬರುವ ಟಿ20 ಕ್ರಿಕೆಟ್‌ ವಿಶ್ವಕಪ್‌ಗೆ ಟೀಮ್‌ ಇಂಡಿಯಾದಲ್ಲಿ ಸ್ಥಾನ ಪಡೆಯಲು ಎದುರು ನೋಡುತ್ತಿದ್ದ ಪ್ರತಿಭಾನ್ವಿತ ಆಟಗಾರರಾದ ಕೃಣಾಲ್ ಪಾಂಡ್ಯ, ಸಂಜು ಸ್ಯಾಮ್ಸನ್, ಶಿವಂ ದುಬೆ, ಸುರೇಶ್ ರೈನಾ ಮತ್ತು ರಿಷಭ್ ಪಂತ್ ಕನಸು ನುಚ್ಚು ನೂರಾಗುವ ಸಾಧ್ಯತೆ ಇದೆ ಎಂದು ಭಾರತ ತಂಡದ ಮಾಜಿ ಆಟಗಾರ ಹಾಗೂ ಕ್ರಿಕೆಟ್‌ ವಿಶ್ಲೇಶಕ ಆಕಾಶ್‌ ಚೋಪ್ರಾ ಹೆಸರಿಸಿದ್ದಾರೆ.

Leave a Comment