‘100’ ಚಿತ್ರದಲ್ಲಿ ಖಾಕಿ ತೊಟ್ಟ ರಮೇಶ್ : ಸೈಬರ್ ಕ್ರೈಮ್ ಮಟ್ಟ ಹಾಕ್ತಾರಾ ಎವರ್ ಗ್ರೀನ್ ಸ್ಟಾರ್

ಬೆಂಗಳೂರು, ಜೂನ್ 19- ಚಂದನವನದ ‘ಸುಂದರಾಂಗ’ ರಮೇಶ್ ಅರವಿಂದ್ ನಿರ್ದೇಶಿಸಿ, ಅಭಿನಯಿಸುತ್ತಿರುವ ‘100’ ಚಿತ್ರ ಮುಹೂರ್ತ ನೆರವೇರಿಸಿಕೊಂಡಿದ್ದು, ಸೈಬರ್ ಅಪರಾಧಗಳ ಕುರಿತ ಕಥಾಹಂದರವಿದೆ. ಖಾಕಿ ತೊಟ್ಟಿರುವ ರಮೇಶ್ ಖಡಕ್ ಪೊಲೀಸ್ ಅಧಿಕಾರಿ ’ವಿಷ್ಣು’ ವಾಗಿ ಕಾಣಿಸಿಕೊಳ್ಳಲಿದ್ದಾರೆ. “ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಸಾಕಷ್ಟು ಅನಾಹುತಗಳಾಗುತ್ತಿದ್ದು, ಅನೇಕ ಕುಟುಂಬಗಳ ನೆಮ್ಮದಿಗೆ ಭಂಗ ತಂದಿದೆ. ಹೆಣ್ಣುಮಕ್ಕಳನ್ನು ಪಟಾಯಿಸಲು ಜಾಲತಾಣದ ಮೂಲಕ ಪೋಲಿ ಹುಡುಗರು ಫಾಲೋ ಮಾಡುವುದು, ಸ್ನೇಹ, ಸಂಬಂಧ ಬೆಳೆಸಿಕೊಳ್ಳುವುದು, ಇದರಿಂದ ಉದ್ಭವಿಸುವ ಸಮಸ್ಯೆ ಹಾಗೂ ಪರಿಹಾರ. . ಇದೇ ಚಿತ್ರದ ಸಾರಾಂಶ” ಎಂದು ರಮೇಶ್ ಅರವಿಂದ್ ತಿಳಿಸಿದ್ದಾರೆ.

“ಸುಸಿಲ್ ಶ್ರೀಧರ್ ಅವರ ಕಥಾ ಎಳೆಯನ್ನು ಅವರ ಅನುಮತಿ ಪಡೆದುಕೊಂಡು, ನಮ್ಮ ಕಲ್ಪನೆಗೆ ತಕ್ಕಂತೆ ಬದಲಿಸಲಾಗಿದೆ. ಸೈಬರ್ ಕ್ರೈಮ್ ವಿಷಯವನ್ನು ಹಾಗೇ ಉಳಿಸಿಕೊಂಡಿದ್ದು, ರಚಿತಾ ರಾಮ್ ಪಾತ್ರವನ್ನು ಹೊಸದಾಗಿ ಸೃಷ್ಟಿಸಲಾಗಿದೆ. ತಮಿಳಿನಲ್ಲಿ ಈಗಾಗಲೇ ಚಿತ್ರ ಹೊರಬಂದಿದ್ದು, ಕನ್ನಡ ಹಾಗೂ ಹಿಂದಿಯಲ್ಲಿ ವಿಭಿನ್ನ ರೂಪದಲ್ಲಿ ನಿರ್ಮಾಣವಾಗಲಿದೆ” ಎಂದರು.

ತೇಜಸ್ವಿನಿ ಎಂಟರ್ ಪ್ರೈಸಸ್ ನಲ್ಲಿ `ಪಡ್ಡೆಹುಲಿ’ ಸೇರಿದಂತೆ 3 ಚಿತ್ರಗಳನ್ನು ನೀಡಿರುವ ರಮೇಶ್ ರೆಡ್ಡಿಯವರ ನೂತನ ‘ಸೂರಜ್ ಪ್ರೊಡಕ್ಷನ್ಸ್’ ಅಡಿಯಲ್ಲಿ ಚಿತ್ರ ನಿರ್ಮಾಣವಾಗಲಿದೆ. ‘ಸುವರ್ಣ ಸುಂದರಿ’ ಚಿತ್ರದಲ್ಲಿ ನಟಿಸಿದ್ದ ಪೂರ್ಣ ರಮೇಶ್ ಅರವಿಂದ್ ಜೋಡಿಯಾಗಿ ಅಭಿನಯಿಸಲಿದ್ದಾರೆ. ರಚಿತಾ ರಾಮ್ ಸದಾ ಕೈಯಲ್ಲಿ ಮೊಬೈಲ್ ಹಿಡಿದಿರುವ ಯುವತಿಯ ಪಾತ್ರದಲ್ಲಿ ಮಿಂಚಲಿದ್ದಾರೆ. ರಮೇಶ್ ಅರವಿಂದ್ ಅಭಿನಯದ ನೂರನೆ ಸಿನಿಮಾ ‘ಪುಷ್ಪಕ ವಿಮಾನ’ ಸಿನಿಮಾದಲ್ಲಿ ಅವರ ಮಗಳ ಪಾತ್ರದಲ್ಲಿ ರಚಿತಾ ಕಾಣಿಸಿಕೊಂಡಿದ್ದರಾದರೂ, ಒಟ್ಟಿಗೆ ಸ್ಕ್ರೀನ್ ಶೇರ್ ಮಾಡುವ ಅವಕಾಶ ಇರಲಿಲ್ಲ. ‘100’ ಸಿನಿಮಾದಲ್ಲಿ ಆ ಅವಕಾಶ ಪಡೆದುಕೊಂಡಿದ್ದಾರೆ.

ತಾರಾಗಣದಲ್ಲಿ ರಮೇಶ್ ಅರವಿಂದ್, ಪೂರ್ಣ, ರಚಿತಾ ರಾಮ್, ವಿಶ್ವಾಸ್, ರಾಜೇಶ್, ಸುಕನ್ಯಾ, ಅಮಿತಾ ರಂಗನಾಥ್, ಲಕ್ಷ್ಮೀ ಆನಂದ್ ಮೊದಲಾದವರಿದ್ದಾರೆ. ರವಿ ಬಸ್ರೂರ್ ಸಂಗೀತ, ಶ್ರೀವತ್ಸ ಸಂಕಲನವಿದೆ.

Leave a Comment