10 ಲಕ್ಷ ಮನೆ ನಿರ್ಮಾಣ: ಸೋಮಣ್ಣ

ಬಳ್ಳಾರಿ, ಫೆ.25: ರಾಜ್ಯದ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಸತಿ ರಹಿತರಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆ ಮತ್ತು ರಾಜೀವಗಾಂಧಿ ವಸತಿ ನಿಗಮದಿಂದ ಬರುವ ಒಂದು ವರ್ಷದಲ್ಲಿ 10 ಲಕ್ಷ ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ಅವರಿಂದು ಬಳ್ಳಾರಿ ನಗರದ ಹೊರವಲಯದ ಮುಂಡರಗಿ ಬಳಿ ರಾಜೀವಗಾಂಧಿ ವಸತಿ ನಿಗಮದಿಂದ ಎನ್.ಎಂ.ಡಿ.ಸಿ ಮಹತ್ಮಾಗಾಂಧಿ ವಸತಿ ಯೋಜನೆಯಡಿ 338 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 5616 ಮನೆಗಳ ಕಾಮಗಾರಿ ಪರಿಶೀಲನೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 5 ಲಕ್ಷ ಮನೆ, ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ 1.20 ಲಕ್ಷ ಮನೆ, ರಾಜೀವಗಾಂಧಿ ವಸತಿ ನಿಗಮದಿಂದ ಬೆಂಗಳೂರಿನಲ್ಲಿ 1 ಲಕ್ಷ ಮತ್ತು ಬಳ್ಳಾರಿ, ಬೆಳಗಾವಿ, ಬಾಗಲಕೋಟೆ, ಗದಗ, ಧಾರವಾಡ ಮೊದಲಾದ ನಗರಗಳಲ್ಲಿ 1.5 ಲಕ್ಷ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಕಳೆದ ಕೆಲ ದಿನಗಳ ಹಿಂದೆ 59 ಸಾವಿರ ಮನೆಗಳ ನಿರ್ಮಾಣಕ್ಕೆ 211 ಕೋಟಿ ರೂ ಬಿಡುಗಡೆ ಮಾಡಿದ್ದು ನಿಗಮದ ಬಳಿ 900 ಕೋಟಿ ಹಣವಿದೆ ಎಂದರು.
ಮನೆಗಳನ್ನು ಪಡೆಯುವ ಕೆಲ ಫಲಾನುಭವಿಗಳು ಅರ್ಹರಿಲ್ಲ ಎಂಬ ದೂರುಗಳ ಹಿನ್ನಲೆಯಲ್ಲಿ ಫಲಾನುಭವಿಗಳ ಪಡಿತರ ಚೀಟಿ, ಆಧಾರ್ ಲಿಂಕ್ ಮಾಡಿ ನಕಲಿ ಫಲಾನುಭವಿಗಳ ಪತ್ತೆ ಕಾರ್ಯಕ್ಕೆ ತಹಶೀಲ್ದಾರ್ ಮತ್ತು ತಾಲೂಕು ಮತ್ತು ಗ್ರಾಮ ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದೆಂದರು.
ಪ್ರಧಾನಿ ಮೋದಿ ಅವರು ಆಶಯದಂತೆ ಪ್ರತಿಯೊಬ್ಬ ಬಡವರಿಗೆ ಸೂರು ಕಲ್ಪಿಸುವುದಾಗಿದೆ. ಮನೆಗಳ ನಿರ್ಮಾಣದ ಗುಣಮಟ್ಟ ಕಾಪಾಡುವಂತೆ ಅಧಿಕಾರಿಗಳಿಗೆ ನೀಡಲಾಗಿದೆ.
100 ವರ್ಷ ಗ್ಯಾರಂಟಿ
ಬಳ್ಳಾರಿಯಲ್ಲಿ ನಿರ್ಮಿಸಲಾಗುತ್ತಿರುವ ಮನೆಗಳು ಕ್ಯೂರಿಂಗ್ ಕಾಂಪೌಂಡ್ ಪ್ರಕ್ರಿಯೆಯಿಂದ ಕೂಡಿದ್ದು ಇವುಗಳಿಗೆ ನೀರು ಹಾಕಿ ಕ್ಯೂರಿಂಗ್ ಮಾಡಬೇಕಿಲ್ಲ. ಇವು 100 ವರ್ಷ ಬಳಕೆ ಬರಲಿದೆ ಎಂದರು.
ಇಲ್ಲಿ ಶಾಲೆ, ಆಸ್ಪತ್ರೆ, ಅಂಗನವಾಡಿ, ವಾಣಿಜ್ಯ ಮಳಿಗೆ, ಕ್ರೀಡಾಂಗಣ, ಕುಡಿಯುವ ನೀರು, ಬೀದಿದೀಪ, ಆಸ್ಪತ್ರೆ, ಉದ್ಯಾನವನ, ಒಳಚರಂಡಿ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಸರ್ಕಾರ ನೀಡಲಿದೆಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಈ ಸಂದರ್ಭದಲ್ಲಿ ತಿಳಿಸಿದರು.
ಭೇಷ್
ರಾಜ್ಯದಲ್ಲಿ ಅನೇಕ ಅಧಿಕಾರಿಗಳು ಯೋಜನಾ ಪ್ರದೇಶಗಳಿಗೆ ಭೇಟಿ ನೀಡುವುದೇ ಇಲ್ಲ, ನೀವು ಭೇಷ್ ಎಂದು ಜಿಲ್ಲಾಧಿಕಾರಿ ನಕುಲ್ ಅವರ ಬೆನ್ನು ತಟ್ಟಿದ ಸಚಿವ ಸೋಮಣ್ಣ ಅವರು ನಿಮ್ಮಂತೆ ಚಿತ್ರದುರ್ಗದ ಜಿ.ಪಂ. ಸಿ.ಈ.ಓ ಸತ್ಯಬಾಮ, ಬೀದರನ ಮಹದೇವ್, ಸೇರಿದಂತೆ ಕೆಲವರು ಉತ್ತಮವಾಗಿ ಕೆಲಸ ಮಾಡುತ್ತಿದ್ದೀರಿ ಎಂದರು.
ಆಯ್ತು
ಈ ಸಂದರ್ಭದಲ್ಲಿ ಶಾಸಕ ಸೋಮಶೇಖರರೆಡ್ಡಿ, ಸಂಸದ ವೈ.ದೇವೇಂದ್ರಪ್ಪ, ರಾಜೀವಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಮ್ ಪ್ರಸಾತ್ ಮನೋಹರ್ ಮೊದಲಾದವರು ಇದ್ದರು.

Leave a Comment