10 ಗಗನ ಯಾತ್ರಿಗಳಿಗೆ ಐಎ‌ಎಫ್ ತರಬೇತಿ

ನವದೆಹಲಿ, ಫೆ. ೧೧- ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಚೊಚ್ಚಲ ಮಾನವ ಸಹಿತ ಬಾಹ್ಯಾಕಾಶ ಯಾನಕ್ಕಾಗಿ 10 ಮಂದಿ ಗಗನ ಯಾನಿಗಳನ್ನು ಆಯ್ಕೆ ಮಾಡುವ ಮತ್ತು ಅವರಿಗೆ ತರಬೇತಿ ನೀಡುವ ಹೊಣೆಯನ್ನು ಭಾರತೀಯ ವಾಯುಪಡೆಗೆ ನೀಡಿದೆ.

ಗಗನ ಯಾನಿಗಳನ್ನು ಆಯ್ಕೆ ಮಾಡುವ ಮತ್ತು ತರಬೇತಿ ನೀಡುವ ವಿಷಯದಲ್ಲಿ ಎಲ್ಲಾ ಮಾನದಂಡಗಳನ್ನು ನಿಗದಿಪಡಿಸಲಾಗಿದೆ. ಅದನ್ನು ಐ.ಎ.ಎಫ್‌ಗೆ ನೀಡಲಾಗುವುದು. 10 ಮಂದಿ ಗಗನ ಯಾನಿಗಳನ್ನು ಆಯ್ಕೆ ಮಾಡುವ ಮತ್ತು ತರಬೇತಿ ನೀಡುವ ಸಂಪೂರ್ಣ ಜವಾಬ್ದಾರಿಯನ್ನು ಐ.ಎ.ಎಫ್‌ಗೆ ವಹಿಸಲಾಗಿದೆ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್, ಆಂಗ್ಲ ಮಾಧ್ಯಮ ಸಂಸ್ಥೆಯೊಂದಿಗೆ ಮಾತನಾಡುತ್ತ ಹೇಳಿದ್ದಾರೆ.

ನಮಗೆ, ಐ.ಎ.ಎಫ್ 10 ಮಂದಿ ಗಗನ ಯಾನಿಗಳನ್ನು ತಯಾರು ಮಾಡಿಕೊಡುತ್ತದೆ. ಅದರಲ್ಲಿ ಅಂತಿಮದಲ್ಲಿ ನಾವು 3 ಮಂದಿಯನ್ನು ಆಯ್ಕೆ ಮಾಡಿಕೊಳ್ಳುತ್ತೇವೆ ಎಂದೂ ಅಧ್ಯಕ್ಷ ಕೆ. ಶಿವನ್ ಹೇಳಿದ್ದಾರೆ.

ತರಬೇತಿ ಎರಡು ಹಂತದಲ್ಲಿ ನಡೆಯುತ್ತದೆ. ಒಂದನೇ ಹಂತದ ತರಬೇತಿ ಐ.ಎ.ಎಫ್‌ನ ಏರ್‌ಸ್ಪೇಸ್ ಮೆಡಿಸಿನ್ ಸಂಸ್ಥೆಯಲ್ಲಿ ನಡೆಯುತ್ತದೆ. ಎರಡನೇ ಹಂತದ ತರಬೇತಿ ವಿದೇಶದಲ್ಲಿ ನಡೆಯುತ್ತದೆ ಎಂದು ಶಿವನ್ ಹೇಳಿದ್ದಾರೆ.
ಐ.ಎ.ಎಫ್‌ನ ಅಂಗಸಂಸ್ಥೆಯಾಗಿರುವ ಏವಿಯೇಷನ್ ಮೆಡಿಸಿನ್ ಸಂಸ್ಥೆ 1980 ರಲ್ಲಿ ಇಂಡೋ ಸೋವಿಯತ್ ಮಾನವ ಸಹಿತ ಗಗನಯಾನಗಳ ಯೋಜನೆಯಲ್ಲಿ ಗಗನಯಾನಿಗಳ ವೈದ್ಯಕೀಯ ಜವಾಬ್ದಾರಿಯನ್ನು ನಿರ್ವಹಿಸಿತ್ತು.
ಗಗನಯಾನ ಯೋಜನೆಗೆ ಗಗನಯಾನಿಗಳಿಗೆ ತರಬೇತಿ ನೀಡುವಲ್ಲಿ ಭಾಗಿಯಾಗಲು ಇಸ್ರೋ ಏವಿಯೇಷನ್ ಮೆಡಿಸಿನ್ ಸಂಸ್ಥೆ ಕೋರಿದೆ ಎಂದು ಸಂಸ್ಥೆಯ ಡೈರೆಕ್ಟರ್ ಜನರಲ್ ಬಿಪಿನ್ ಪುರಿ ಹೇಳಿದ್ದಾರೆ.

Leave a Comment