10 ಕೋಟಿ ರೂ. ನೆರವು ಸಿಎಂ ಸ್ಪಷ್ಟನೆ

ಬೆಂಗಳೂರು, ಆ. ೧೬- ಪ್ರವಾಹದಿಂದಾಗಿ ಕೊಚ್ಚಿಹೋಗಿರುವ ಗ್ರಾಮಗಳ ಪುನರ್ ನಿರ್ಮಾಣ ಕಾರ್ಯಕ್ಕೆ 10 ಕೋಟಿ ರೂ. ಗಳಿಗೂ ಹೆಚ್ಚಿನ ದೇಣಿಗೆ ನೀಡುವ ಕೈಗಾರಿಕೋದ್ಯಮಿಗಳ ಹೆಸರನ್ನು ಆಯಾಗ್ರಾಮಗಳಿಗೆ ಬದಲಾಗಿ, ಹೊಸದಾಗಿ ನಿರ್ಮಾಣಗೊಳ್ಳುವ ಬಡಾವಣೆಗಳಿಗೆ ಇಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸ್ಪಷ್ಟಪಡಿಸಿದ್ದಾರೆ.

ಗ್ರಾಮಗಳ ಪುನರ್ ನಾಮಕರಣ ಮಾಡುವ ತಮ್ಮ ನಿರ್ಧಾರದ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದಂತೆ, ಎಚ್ಚೆತ್ತುಕೊಂಡಿರುವ ಯಡಿಯೂರಪ್ಪ ಅವರು ತಮ್ಮ ನಿರ್ಧಾರದಿಂದ ಯೂ ಟರ್ನ್ ತೆಗೆದುಕೊಂಡಿದ್ದು, ಪುನರ್ ನಿರ್ಮಾಣಗೊಳ್ಳುವ ಗ್ರಾಮಗಳ ಬದಲಿಗೆ ಅಲ್ಲಿ ತಲೆಎತ್ತಲಿರುವ ಬಡಾವಣೆಗಳಿಗಷ್ಟೇ ಉದ್ಯಮಿಗಳ ಹೆಸರಿಡಲಾಗುವುದೆಂದು ಸ್ಪಷ್ಟಪಡಿಸಿದ್ದಾರೆ.

ಪ್ರವಾಹಪೀಡಿತ ಗ್ರಾಮಗಳ ಪುನರ್ ನಿರ್ಮಾಣಕ್ಕಾಗಿ 10 ಕೋಟಿ ರೂ. ಗಳಿಗೂ ಅಧಿಕ ದೇಣಿಗೆ ನೀಡುವ ಕೈಗಾರಿಕೋದ್ಯಮಿಗಳ ಹೆಸರುಗಳನ್ನು ಪುನರ್ ನಿರ್ಮಾಣಗೊಳ್ಳುವ ಗ್ರಾಮಗಳಿಗೆ ಇಡಲಾಗುವುದು ಎಂಬ ತಮ್ಮ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ನೀಡಿದ್ದಾರೆ.

ಪ್ರವಾಹದಿಂದ ಜಲಾವೃತಗೊಂಡು ಮನೆ – ಮಠಗಳಿಗೆ ಹಾನಿಯಾಗಿರುವ ಗ್ರಾಮಗಳನ್ನು ಪುನರ್ ನಿರ್ಮಾಣ ಮಾಡಲು ಉದಾರ ದೇಣಿಗೆ ನೀಡುವ ಕೈಗಾರಿಕೋದ್ಯಮಿಗಳ ಹೆಸರುಗಳನ್ನು ಹೊಸದಾಗಿ ನಿರ್ಮಿಸುವ ಬಡಾವಣೆಗಳಿಗಷ್ಟೇ ಇಡುವುದಾಗಿ ಸ್ಪಷ್ಟಪಡಿಸಿರುವ ಯಡಿಯೂರಪ್ಪ ಅವರು, ಈ ಸಂಬಂಧ ಟ್ವೀಟ್ ಮಾಡಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ನಡೆದ ಕೈಗಾರಿಕೋದ್ಯಮಿಗಳು ಮತ್ತು ಕಾರ್ಪೊರೇಟ್ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಯಡಿಯೂರಪ್ಪ ಅವರು, ಸಭೆ ನಡೆಸಿದ ಸಂದರ್ಭದಲ್ಲಿ ಪ್ರವಾಹ ಪೀಡಿತ ಗ್ರಾಮಗಳ ಪುನರ್ ನಿರ್ಮಾಣಕ್ಕೆ 10 ಕೋಟಿ ರೂ. ಗಳಿಗೂ ಅಧಿಕ ಮೊತ್ತದ ದೇಣಿಗೆ ನೀಡುವ ಕಂಪನಿಗಳು ಅಥವಾ ಉದ್ಯಮಿಗಳ ಹೆಸರನ್ನು ಇಡಲಾಗುವುದೆಂದು ಭರವಸೆ ನೀಡಿದ್ದರು. ಇದು ಕೆಲವು ಜನರಲ್ಲಿ ಆಶ್ಚರ್ಯ ಮೂಡಿಸಿತ್ತು.

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು, ಗ್ರಾಮಗಳಿಗೆ ಉದ್ಯಮಿಗಳ ಹೆಸರನ್ನು ನಾಮಕರಣ ಮಾಡುವ ಸರ್ಕಾರದ ನಿರ್ಧಾರ ತೊಘಲಕ್ ದರ್ಬಾರ್‌ನಂತಿದೆ ಎಂದು ಕಟುವಾಗಿ ಟೀಕಿಸಿದ್ದರು.

ಎಲ್ಲವನ್ನೂ ಕಳೆದುಕೊಂಡು ಅನಾಥರಾಗಿರುವ ಗ್ರಾಮಸ್ಥರ ಪಾಲಿಗೆ ಆಯಾಗ್ರಾಮಗಳ ಹೆಸರನ್ನೂ ಪುನರ್ ನಾಮಕರಣ ಮಾಡುವ ಮೂಲಕ ಅವರ ಭಾವನೆಗಳಿಗೆ ಧಕ್ಕೆ ತರಬೇಡಿ ಎಂದು ಜೆಡಿಎಸ್ ನಾಯಕರು ಹೇಳಿದ್ದರು. ಕರ್ನಾಟಕವನ್ನು ಮಾರಾಟಕ್ಕೆ ಇಡಬೇಡಿ ಎಂದು ಜೆಡಿಎಸ್ ನಾಯಕರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

Leave a Comment