ಬೇಡಿಕೆ ಈಡೇರಿಕೆಗೆ ದೇವದಾಸಿಯರ ಪ್ರತಿಭಟನೆ

ಬೆಂಗಳೂರು, ಫೆ.೧೨- ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಈ ಸಾಲಿನ ಬಜೆಟ್‌ನಲ್ಲಿ ದೇವದಾಸಿ ಮಹಿಳೆಯರ ಬೇಡಿಕೆಗಳನ್ನು ಈಡೇರಿಸದೆ, ಅನ್ಯಾಯ ಮಾಡಿದ್ದಾರೆಂದು ಆರೋಪಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ನಗರದಲ್ಲಿಂದು ಸಿಟಿ ರೈಲ್ವೆ ನಿಲ್ದಾಣ ಬಳಿ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಫ್ರೀಡಂ ಪಾರ್ಕ್‌ವರೆಗೂ ಮೆರವಣಿಗೆ ನಡೆಸಿದರು.

ಶತಮಾನಗಳಿಂದಲೂ ದೇವದಾಸಿ ಮಹಿಳೆಯರು ತುಳಿತಕ್ಕೊಳಗಾಗಿದ್ದಾರೆ. ಅವರು ಸ್ವಾವಲಂಬಿ ಜೀವನ ನಡೆಸುವಂತೆ ಪುನರ್ವಸತಿ ಕಲ್ಪಿಸಲು ಒತ್ತಾಯಿಸಲಾಗಿತ್ತು. ಆದರೆ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಎಲ್ಲಾ ದೇವದಾಸಿ ಮಹಿಳೆಯರಿಗೂ ಮತ್ತು ಈ ಕುಟುಂಬಗಳ ಪರಿತ್ಯಕ್ತ ಮಹಿಳೆಯರಿಗೂ ಮಾಸಿಕ ಸಹಾಯ ಧನವನ್ನು ೫ ಸಾವಿರ ರೂಗಳಿಗೆ ಹೆಚ್ಚಿಸಬೇಕು.ಜತೆಗೆ,

ರಾಜ್ಯಾದ್ಯಂತ ದೇವದಾಸಿ ಮಹಿಳೆಯರ ಮತ್ತು ಅವರ ಕುಟುಂಬದ ಸದಸ್ಯರ ಗಣತಿಯನ್ನು ನಡೆಸಬೇಕು ಎಂದು ಪ್ರತಿಭಟನಾನಿರತ ಟಿ.ವಿ.ರೇಣುಕಮ್ಮ ಆಗ್ರಹಿಸಿದರು.

ದೇವದಾಸಿ ಮಹಿಳೆಯರ ಮತ್ತು ಕುಟುಂಬದ ಸದಸ್ಯರ ಪುನರ್ ವಸತಿಗಾಗಿ ಭೂಮಿ ಒದಗಿಸುವ ಯೋಜನೆಗೆ ಪ್ರತಿವರ್ಷ ೫ ಸಾವಿರ ಕೋಟಿ ರೂ.ಗಳ ಅನುದಾನ ನೀಡಬೇಕು. ಪ್ರತಿ ದೇವದಾಸಿ, ದಲಿತ ಹಾಗೂ ಬಡ ರೈತ, ಕೂಲಿಕಾರರಿಗೆ ಕನಿಷ್ಟ ೧೦ ಸೇಂಟ್ಸ್ ಸ್ಥಳವಕಾಶದಲ್ಲಿ ಕನಿಷ್ಟ ೫ ಲಕ್ಷ ರೂ. ಮೌಲ್ಯದ ಮನೆಯನ್ನು ಉಚಿತವಾಗಿ ನಿರ್ಮಾಣ ಮಾಡಿಕೊಡಬೇಕು.

ಉದ್ಯೋಗಖಾತ್ರಿ ಕೆಲಸವನ್ನು ಕನಿಷ್ಟ ೨೦೦ ದಿನಗಳ ಕಾಲ ಕಡ್ಡಾಯವಾಗಿ ಒದಗಿಸಿ ನಗರ ಪ್ರದೇಶಗಳಿಗೂ ವಿಸ್ತರಿಸಬೇಕು. ಹಾಗೂ ಕನಿಷ್ಟ ಕೂಲಿಯನ್ನು ೬೦೦ ರೂ.ಗಳಿಗೆ ಹೆಚ್ಚಿಸಬೇಕು.ಅಲ್ಲಿಯವರೆಗೂ, ಹೋರಾಟ ಮುಂದುವರೆಸಲಾಗುವುದು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.

Leave a Comment