೪೦ ಕೋಟಿ ರೂ. ಸಂಭಾವನೆ ಪಡೆಯಲಿದ್ದಾರಂತೆ ಶಾಹಿದ್!

ಮುಂಬೈ, ಜು ೨೪ – ಬಾಲಿವುಡ್ ನಟ ಶಾಹಿದ್ ಕಪೂರ್ ’ಕಬೀರ್ ಸಿಂಗ್’ ಚಿತ್ರದಲ್ಲಿ ಅಭಿನಯಿಸಿದ ನಂತರ ಅವರ ವೃತ್ತಿ ಜೀವನ ಹೊಸ ತಿರುವು ಪಡೆದುಕೊಂಡಿದ್ದು, ಮುಂಬರುವ ಚಿತ್ರಕ್ಕಾಗಿ ೪೦ ಕೋಟಿ ರೂ ಸಂಭಾವನೆ ಪಡೆಯಲು ನಿರ್ಧರಿಸಿದ್ದಾರೆ.

ಕಬೀರ್ ಸಿಂಗ್ ಈ ವರ್ಷದ ಅತಿ ಹೆಚ್ಚು ಗಲ್ಲಾಪೆಟ್ಟಿಗೆ ತುಂಬಿಸಿದ ಚಿತ್ರವಾಗಿದ್ದು,  ಸುಮಾರು ೨೭೦ ಕೋಟಿ.ರೂ ಗಿಂತ ಹೆಚ್ಚು ಹಣ ಗಳಿಕೆ ಮಾಡಿದೆ.

ಕೆಲ ಕಾಲದಿಂದ ಶಾಹಿದ್ ನಟಿಸಿರುವ ಚಿತ್ರಗಳು ಹಿಟ್ ಆಗದಿರುವುದರಿಂದ ಅವರಿಗೆ ಯಾವುದೇ ಚಿತ್ರ ದೊರೆತಿರಲಿಲ್ಲ. ಆದರೆ, ’ಕಬೀರ್ ಸಿಂಗ್’ ಚಿತ್ರದಲ್ಲಿ ಅವರ ನಟನೆಗೆ ಮಾರುಹೋದ ಪ್ರೇಕ್ಷಕ ವರ್ಗ ರಾತ್ರೋರಾತ್ರಿ ಅವರನ್ನು ಆಕಾಶದೆತ್ತರಕ್ಕೆ ಕೊಂಡೊಯ್ದಿದೆ. ಶಾಹಿದ್ ಮೊದಲು, ಒಂದು ಚಿತ್ರಕ್ಕಾಗಿ ೧೦-೧೨ ಕೋಟಿ ರೂ ಸಂಭಾವನೆ ಪಡೆಯುತ್ತಿದ್ದರು. ಈಗ ಅದರ ದರವನ್ನು ನಾಲ್ಕು ಪಟ್ಟು ಹೆಚ್ಚಿಸಿಕೊಂಡಿದ್ದಾರೆ. ಶಾಹಿದ್ ಗೆ ತೆಲುಗಿನ ’ಜರ್ಸಿ’ ಚಿತ್ರದ ರಿಮೇಕ್ ನಲ್ಲಿ ಅಭಿನಯಿಸಲು ಅವಕಾಶವೊಂದು ಒಲಿದು ಬಂದಿದ್ದು, ಈ ಚಿತ್ರಕ್ಕಾಗಿ ಅವರು ಬರೋಬ್ಬರಿ ೪೦ ಕೋಟಿ ರೂ ಸಂಭಾವನೆ ಕೇಳಿದ್ದಾರಂತೆ.

’ಜರ್ಸಿ’ ಇದೊಂದು ಕ್ರಿಕೆಟ್ ಆಟಗಾರನ ಭಾವನಾತ್ಮಕ ಪಯಣದ ಚಿತ್ರಕಥೆ. ಶಾಹಿದ್ ಕೇಳಿದಷ್ಟು ಸಂಭಾವನೆ ನಿರ್ಮಾಪಕರು ಕೊಟ್ಟರೆ ಈ ಚಿತ್ರದಲ್ಲಿ ಶಾಹಿದ್ ಕಾಣಿಸಿಕೊಳ್ಳುವುದು ಪಕ್ಕಾ ಎನ್ನುತ್ತಿದ್ದಾರೆ ಬಿಟೌನ್ ಮಂದಿ.

Leave a Comment