೩ ಸೋದರಿಯರ ಅತ್ಯಾಚಾರ

ಕಾಮುಕರಿಗೆ ೧೫ ದಿನ ನ್ಯಾ.ಸೆರೆ
ಮಂಗಳೂರು, ಜು.೧೨- ಅಪ್ರಾಪ್ತ ವಯಸ್ಕ ಸೋದರಿಯರಿಬ್ಬರನ್ನು ಪ್ರೀತಿ-ಪ್ರೇಮ ಎಂದು ನಂಬಿಕೆ ಬೆಳೆಸಿ ಕಳೆದ ಐದು ವರ್ಷಗಳಿಂದ ನಿರಂತರ ಲೈಂಗಿಕವಾಗಿ ಬಳಸಿಕೊಂಡ ಪ್ರಕರಣ ವೇಣೂರು ಠಾಣಾ ವ್ಯಾಪ್ತಿಯ ಸುಲ್ಕೇರಿ ಎಂಬಲ್ಲಿ ಬೆಳಕಿಗೆ ಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಾಲಕಿಯರ ದೂರದ ಸಂಬಂಧಿಕರೇ ಆಗಿರುವ ಕಾರ್ಕಳ ಮಾಳ ನಿವಾಸಿ ಶರತ್(೨೫) ಮತ್ತು ಪ್ರಕಾಶ್(೨೮) ಎಂಬವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇದೇ ಸೋದರಿಯರ ಅಕ್ಕನೂ ತಿಂಗಳ ಹಿಂದಷ್ಟೇ ಇದೇ ರೀತಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ಮಗುವಿಗೆ ಜನ್ಮ ನೀಡಿದ್ದ ಪ್ರಕರಣ ಬೆಳಕಿಗೆ ಬಂದಿದ್ದು ನಾಗರಿಕ ಸಮಾಜವನ್ನೇ ತಲೆತಗ್ಗಿಸುವಂತೆ ಮಾಡಿದೆ.
ಘಟನೆಯ ವಿವರ:
ನಾರಾವಿ ಸಮೀಪದ ಈದು ನಿವಾಸಿಗಳಾದ ೧೭ ಮತ್ತು ೧೫ ವಯಸ್ಸಿನ ಸೋದರಿಯರು ಸುಲ್ಕೇರಿಯಲ್ಲಿನ ಅಜ್ಜಿಮನೆಯಲ್ಲಿದ್ದು ಗೇರುಬೀಜ ಕಾರ್ಖಾನೆಗೆ ಕೆಲಸಕ್ಕೆ ಹೋಗುತ್ತಿದ್ದರು. ಇವರ ಮನೆಗೆ ಆಗಾಗ ಬರುತ್ತಿದ್ದ ದೂರದ ನಿವಾಸಿಗಳಾದ ಶರತ್ ಮತ್ತು ಪ್ರಕಾಶ್ ಇವರ ಜೊತೆ ಸಲುಗೆ ಬೆಳೆಸಿಕೊಂಡು ಪ್ರೀತಿಸುವುದಾಗಿ ಹೇಳಿ ಮುಂದೆ ಮದುವೆಯನ್ನೂ ಮಾಡುವುದಾಗಿ ಹೇಳಿದ್ದರೆನ್ನಲಾಗಿದೆ. ಇದನ್ನು ನಂಬಿದ ಸೋದರಿಯರು ಯುವಕರ ಜೊತೆ ತಿರುಗಾಡುತ್ತಿದ್ದು ನಿರಂತರ ಲೈಂಗಿಕ ಸಂಪರ್ಕಕ್ಕೆ ಒಳಗಾಗಿದ್ದರೆಂದು ತಿಳಿದುಬಂದಿದೆ. ಕೆಲವು ದಿನಗಳ ಹಿಂದೆ ಬಾಲಕಿಯರ ತಂದೆ ಅಜ್ಜಿಮನೆಗೆ ಬಂದಿದ್ದ ವೇಳೆ ಓರ್ವ ಯುವತಿಯ ದೈಹಿಕ ಬದಲಾವಣೆಯನ್ನು ಗಮನಿಸಿ ಪ್ರಶ್ನಿಸಿದಾಗ ಯುವಕರ ಜೊತೆಗಿನ ಸಂಬಂಧ ಬಯಲಾಗಿದೆ. ಬಳಿಕ ವೇಣೂರು ಠಾಣೆಗೆ ಮಾಹಿತಿ ನೀಡಲಾಗಿದ್ದು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
೧೭ರ ಹರೆಯದ ಬಾಲಕಿ ಪೊಲೀಸರಿಗೆ ಮಾಹಿತಿ ನೀಡಿದ್ದು, ತನ್ನ ೧೨ನೇ ವಯಸ್ಸಿನಲ್ಲಿ ಪ್ರಕಾಶ ತನ್ನನ್ನು ಪ್ರೀತಿಸುವುದಾಗಿ ಹೇಳಿದ್ದು ಅಲ್ಲಿಂದ ಮದುವೆ ಭರವಸೆ ನೀಡಿ ನಿರಂತರ ಲೈಂಗಿಕ ಸಂಬಂಧ ಬೆಳೆಸಿದ್ದರ ಪರಿಣಾಮ ತಾನೀಗ ೫ ತಿಂಗಳ ಗರ್ಭಿಣಿ ಎಂದು ತಿಳಿಸಿದ್ದಾಳೆ. ೧೫ರ ಹರೆಯದ ಬಾಲಕಿ ನೀಡಿದ ಮಾಹಿತಿಯಲ್ಲಿ ಶರತ್ ನನ್ನನ್ನು ಪ್ರೀತಿಸುವುದಾಗಿ ಹೇಳಿದ್ದು ನಿರಂತರ ಲೈಂಗಿಕ ಸಂಪರ್ಕ ಬೆಳೆಸಿದ್ದಾಗಿ ತಿಳಿಸಿದ್ದಾಳೆ. ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಬಾಲಕಿಯರನ್ನು ಮಂಗಳೂರಿನ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೊಳಪಡಿಸಲಾಗಿದೆ. ವಿಶೇಷವೇನೆಂದರೆ ಇದೇ ಬಾಲಕಿಯರ ಹಿರಿಯ ಸೋದರಿಯನ್ನೂ ಕೂಡಾ ಯುವಕನೊಬ್ಬ ಲೈಂಗಿಕವಾಗಿ ಬಳಸಿಕೊಂಡ ಪರಿಣಾಮ ಆಕೆ ಇತ್ತೀಚೆಗೆ ಮಗುವಿಗೆ ಜನ್ಮ ನೀಡಿದ್ದಳು. ಈ ಹಿನ್ನೆಲೆಯಲ್ಲಿ ಚೈಲ್ಡ್ ಲೈನ್ ಅಧಿಕಾರಿಗಳು ೧೦ ವರ್ಷದ ಕಿರಿಯ ಸೋದರಿಯನ್ನು ವಶಕ್ಕೆ ಪಡೆದಿದ್ದಾರೆ.

Leave a Comment