೩ ಲಕ್ಷ ವರ್ಷ ಪುರಾತನ ಭೀಮ್ ಬೇಟ್ಕಾ ವಿಸ್ಮಯ

ಭಾರತ ಉಪಖಂಡದಲ್ಲೆ ಮೊಟ್ಟ ಮೊದಲ ಬಾರಿಗೆ ಮಾನವ ಜೀವಿಸಿದ್ದರ ಬಗ್ಗೆ ಆಧಾರ ಕೊಡುವ ಭೀಮ್ ಬೇಟ್ಕಾ ಕಲ್ಲಿನ ಆಶ್ರಯಗಳು ಪೇಲಿಯೊಲಿಥಿಕ್ ಅಥವಾ ಪೂರ್ವ ಶಿಲಾಯುಗಕ್ಕೆ ಸಂಬಂಧಿಸಿದ ತಾಣವಾಗಿದೆ.

ಈ ವಿಸ್ಮಯಭರಿತ ಕುತೂಹಲಕಾರಿ ತಾಣವಿರುವುದು ಮಧ್ಯ ಪ್ರದೇಶದ ರಾಯ್ಸನ್ ಜಿಲ್ಲೆಯಲ್ಲಿ. ಶಿಲಾಯುಗಕ್ಕೆ ಸಂಬಂಧಿಸಿದ ಶಿಲಾವರ್ಣಚಿತ್ರಗಳನ್ನು ಸಹ ಇಲ್ಲಿ ಕಾಣಬಹುದು. ಆದರೆ ಇವು ಸುಮಾರು ೩೦೦೦೦ ವರ್ಷಗಳಷ್ಟು ಪುರಾತನವಾಗಿವೆ. ಅಲ್ಲದೆ ಇಲ್ಲಿ ಕಂಡುಬರುವ ಗುಹೆಗಳು ನೃತ್ಯದ ಪ್ರಪ್ರಥಮ ಸಾಕ್ಷ್ಯಗಳನ್ನು ಒದಗಿಸುತ್ತವೆ.
ಯುನೆಸ್ಕೊದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಭೀಮ್ ಬೇಟ್ಕಾದ ಹೆಸರನ್ನು ೨೦೦೩ ರಲ್ಲಿ ಸೇರ್ಪಡೆ ಮಾಡಲಾಯಿತು. ಇತಿಹಾಸಪ್ರಿಯ ಪ್ರವಾಸಿಗರಿಗೆ ಹಾಗು ಪುರಾತತ್ವ ತಜ್ಞರಿಗೆ ಇದೊಂದು ನೆಚ್ಚಿನ ಪ್ರವಾಸಿ ಪ್ರದೇಶವಾಗಿದೆ.

ಈ ತಾಣದ ಹೆಸರು ಮಹಾಭಾರತದ ಪೌರಾಣಿಕ ಪಾತ್ರವಾದ ಪಾಂಡವರಲ್ಲಿ ಒಬ್ಬನಾದ ಭೀಮನೊಂದಿಗೆ ನಂಟನ್ನು ಹೊಂದಿದೆ. ಭೀಮ್ ಬೇಟ್ಕಾ ಎಂಬ ಹೆಸರು ಭೀಮ್ ಬೈಟ್ಕಾ ಎಂಬ ಶಬ್ದದಿಂದ ವ್ಯುತ್ಪತ್ತಿಯಾಗಿದ್ದು ಇದರ ಅರ್ಥ ಭೀಮನು ಕೂರುವ ಸ್ಥಳ ಎಂದಾಗುತ್ತದೆ.

ರಾಯ್ಸನ್ ಜಿಲ್ಲೆಯಲ್ಲಿರುವ ಈ ತಾಣವು ರಾಜಧಾನಿ ಭೋಪಾಲ್ ನಗರದ ದಕ್ಷಿಣಕ್ಕೆ ೪೫ ಕಿ.ಮೀಗಳ ದೂರದಲ್ಲಿದೆ. ಇದರ ಸುತ್ತಮುತ್ತಲಿನ ಪ್ರದೇಶವು ದಟ್ಟವಾದ ಸಸ್ಯ ಸಂಪತ್ತಿನಿಂದ ಆವರಿಸಿದೆ. ಇಲ್ಲಿರುವ ಕಲ್ಲಿನ ಆಸರೆಗಳು (ಶೆಲ್ಟರ್ಸ್) ಹಾಗು ಗುಹೆಗಳಲ್ಲಿ ಸಾಕಷ್ಟು ಶಿಲಾಯುಗಕ್ಕೆ ಸಂಬಂಧಿಸಿದ ವರ್ಣಚಿತ್ರಗಳನ್ನು ಕಾಣಬಹುದಾಗಿದೆ. ಕೆಲವು ವರ್ಣಚಿತ್ರಗಳು ೩೦೦೦೦ ವರ್ಷಗಳಷ್ಟು ಪುರಾತನವಾಗಿದ್ದರೆ ಇನ್ನೂ ಕೆಲವು ಜಾಮಿತಿಯ ಆಕೃತಿಗಳು ಮಧ್ಯಯುಗದಲ್ಲಿ ರಚಿತವಾಗಿರುವುದಾಗಿವೆ.

ಮೊದಲನೇಯ ವರ್ಗದ ಪೂರ್ವ ಶಿಲಾಯುಗಕ್ಕೆ ಸಂಬಂಧಿಸಿದ ವರ್ಣಚಿತ್ರಗಳಲ್ಲಿ ಹಸಿರು ಹಾಗು ಕಡು ಕೆಂಪು ಬಣ್ಣವನ್ನು ಬಳಸಿ ಹುಲಿ, ಬೈಸನ್, ಘೇಂಡಾಮೃಗಗಳಂತಹ ಪ್ರಾಣಿಗಳನ್ನು ದೊಡ್ಡ ಆಕಾರದಲ್ಲಿ ಬಿಡಿಸಲಾಗಿದೆ.

ಎರಡನೇಯ ವರ್ಗದ ಪೂರ್ವಶಿಲಾಯುಗಕ್ಕೆ ಸಂಬಂಧಿಸಿದ ವರ್ಣಚಿತ್ರಗಳು ಚಿಕ್ಕ ಗಾತ್ರದ ಕಲಾಕೃತಿಗಳನ್ನು ಒಳಗೊಂಡಿದ್ದು, ಮನುಷ್ಯರ, ಪ್ರಾಣಿಗಳ, ಉಪಕರಣಗಳು, ಬೇಟೆಯಾಡುವ, ಸನ್ನಿವೇಶಗಳನ್ನು ಒಳಗೊಂಡಿವೆ. ಹೀಗೆ ಪೂರ್ವ ಶಿಲಾಯುಗದಿಂದ ಪ್ರಾರಂಭವಾಗಿ ಮಧ್ಯ ಯುಗದವರೆಗೆ ಒಟ್ಟು ಏಳು ವರ್ಗಗಳಲ್ಲಿ ಚಿತ್ರಗಳನ್ನು ಕಾಣಬಹುದು .

Leave a Comment