೨ ಕೋಮು ಸಂಘಟನೆ ನಿಷೇಧ

ಮಂಗಳೂರು, ಜ.೧೨: ಎರಡು ಕೋಮು ಸಂಘಟನೆಗಳ ನಿಷೇಧಕ್ಕೆ ಗಂಭೀರ ಚಿಂತನೆ ನಡೆದಿದೆ. ಮುಖ್ಯಮಂತ್ರಿಗಳ ಜೊತೆ ಈ ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇನೆ’ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜೊತೆ ಮಾತಾಡಿದ ಸಚಿವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು, ಸುವ್ಯವಸ್ಥೆಗೆ ಮಾರಕವಾಗಿರುವ ಸಂಘಟನೆಗಳ ಮೇಲೆ ಇಲಾಖೆ ಕಣ್ಣಿಟ್ಟಿದೆ ಎಂದು ತಿಳಿಸಿದರು.
ಕಮಿಷನರ್ ಕಚೇರಿಯಲ್ಲಿ ಪಶ್ಚಿಮ ವಲಯ ಪೊಲೀಸ್ ಅಧಿಕಾರಿಗಳ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಿಂದೂ ಉಗ್ರತ್ವ, ಮತ್ತು ಸಮಾಜದಲ್ಲಿ ಯಾರು ಭಯದ ವಾತಾವರಣವನ್ನು ಉಂಟುಮಾಡುತ್ತಾರೋ ಅವರನ್ನು ಭಯೋತ್ಪಾದಕರು ಎಂದು ಕರೆಯುತ್ತಾರೆ. ಮೈಸೂರು ಸಂಸದರು ಮಾತಾಡುವ ವಿಡಿಯೋವನ್ನು ನೀವೆಲ್ಲರೂ ನೋಡಿದ್ದೀರಲ್ಲ, ಇದು ಭಯ ಹುಟ್ಟಿಸುವ ಕೆಲಸ, ಈ ದೃಷ್ಟಿಯಲ್ಲಿ ಮುಖ್ಯಮಂತ್ರಿಯವರು ಹಿಂದೂ ಸಂಘಟನೆಗಳ ನಾಯಕರನ್ನು ಭಯೋತ್ಪಾದಕರು ಎಂದಿದ್ದಾರೆ’ ಎಂಬುದಾಗಿ ರಾಮಲಿಂಗಾರೆಡ್ಡಿ ಹೇಳಿದರು.
ಅಧಿಕಾರಿಗಳ ಸಭೆಯಲ್ಲಿ ನಗರ ಪೊಲೀಸ್ ಆಯುಕ್ತ ಟಿ.ಸುರೇಶ್, ಎಸ್‌ಪಿ ಸುರೇಶ್ ಶೆಟ್ಟಿ, ಪ್ರಭಾರ ಐಜಿಪಿ ಅರುಣ್ ಚಕ್ರವರ್ತಿ, ಚಿಕ್ಕಮಗಳೂರು ಎಎಸ್‌ಪಿ ಕೆ.ಹೆಚ್.ಜಗದೀಶ್ ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಘರ್ಷನೆಗೆ ಕಾರಣವಾಗುವ ಘಟನೆಗಳು ಮತ್ತು ಅದರಲ್ಲಿ ಭಾಗಿಯಾಗುವ ಕೆಲ ಸಂಘಟನೆಗಳ ನಾಯಕರು, ಕಾರ್ಯಕರ್ತರ ಮೇಲೆ ಕಠಿಣ ಕ್ರಮ ಜರುಗಿಸುವ ಹಿನ್ನೆಲೆಯಲ್ಲಿ ಗೃಹಸಚಿವರು ಇಂದಿನ ಸಭೆಯಲ್ಲಿ ಮಹತ್ವದ ಆದೇಶ ನೀಡಿದರು.
ಇತ್ತೀಚೆಗೆ ಕಾಟಿಪಳ್ಳದಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ದೀಪಕ್ ರಾವ್ ಮತ್ತು ಕೊಟ್ಟಾರದಲ್ಲಿ ಹತ್ಯೆಗೀಡಾದ ಅಮಾಯಕ ಬಶೀರ್ ಮನೆಗೆ ಗೃಹಸಚಿವರು ಮಧ್ಯಾಹ್ನದ ವೇಳೆ ಭೇಟಿ ನೀಡಿದರು.
ಆರೆಸ್ಸೆಸ್ ಭಜರಂಗದಳ ಸಂಘಟನೆಗಳು ಭಯೋತ್ಪಾದಕ ಸಂಘಟನೆಗಳು ಎಂದಿರುವ ಮುಖ್ಯಮಂತ್ರಿಯವರ ಹೇಳಿಕೆಯನ್ನು ಗೃಹಸಚಿವರು ಸಮರ್ಥಿಸಿಕೊಂಡಿದ್ದಾರೆ.

Leave a Comment