೨೭ ಸಾವಿರ ಕೆಜಿ ಬಿರಿಯಾನಿ ಅಕ್ಕಿಯೊಂದಿಗೆ ಲಾರಿ ಚಾಲಕ ಪರಾರಿ

ಚೆನ್ನೈ, .೨೨ತಿರುವತ್ತಿರಿಯೂರು ಎಂಬಲ್ಲಿ ಟ್ರಕ್ ಚಾಲಕನೊಬ್ಬ ೨೧ ಲಕ್ಷ ರೂಪಾಯಿ ಮೌಲ್ಯದ ೨೭ ಸಾವಿರ ಕೆ.ಜಿ ಬಿರಿಯಾನಿ ಅಕ್ಕಿಯೊಂದಿಗೆ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಕೆ.ಕೆ.ಸಾಮಿ ಎಂಬ ಟ್ರಕ್ ಚಾಲಕ ೨೭ ಟನ್ ಬಿರಿಯಾನಿ ಅಕ್ಕಿಯೊಂದಿಗೆ ತಪ್ಪಿಸಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಸರಕು ಸಾಗಾಟ ವಾಹನವನ್ನು ಬಾಡಿಗೆಗೆ ನೀಡುವ ಸಾರಿಗೆ ಕಂಪೆನಿಯೊಂದರಲ್ಲಿ ಸಾಮಿ ಉದ್ಯೋಗಿಯಾಗಿದ್ದ. ತಿರುವತ್ತಿರಿಯೂರಿನ ಅಣ್ಣಾಮಲೈ ನಗರದ ಮರತುಮುತ್ತು ಎಂಬುವವರಿಗೆ ಸೇರಿದ ಟ್ರಕ್ ಇದಾಗಿದೆ.

ಸೋಮವಾರ ಸಾಮಿ ಹಾಗೂ ಸಹೋದ್ಯೋಗಿ ಸುಂದರ್ರಾಜ್ ಎಂಬುವವರಿಗೆ ೨೭ ಟನ್ ಬಿರಿಯಾನಿ ಅಕ್ಕಿಯನ್ನು ಪೂನಮಲೈ ಅಕ್ಕಿ ವ್ಯಾಪಾರಿಯೊಬ್ಬರಿಗೆ ಸರಬರಾಜು ಮಾಡುವಂತೆ ಸೂಚಿಸಲಾಗಿತ್ತು. ಟ್ರಕ್ಗೆ ಅಕ್ಕಿ ಲೋಡ್ ಮಾಡಿದ ಬಳಿಕ ಸಾಮಿ ಹಾಗೂ ಸುಂದರ್ ಮನೆಗೆ ಹೋಗಿ ರಾತ್ರಿ ಊಟ ಮುಗಿಸಿಕೊಂಡು ಬರುವಂತೆ ಸೂಚಿಸಲಾಗಿದೆ. ಮನೆ ಸನಿಹದಲ್ಲೇ ಇದ್ದ ಕಾರಣ ಸುಂದರ್ ಮನೆಗೆ ಹೋಗಿ ಊಟ ಮುಗಿಸಿಕೊಂಡು ಬಂದಾಗ ಸಾಮಿ ಹಾಗೂ ಟ್ರಕ್ ನಾಪತ್ತೆಯಾಗಿತ್ತು ಎಂದು ಪೊಲೀಸರು ವಿವರಿಸಿದ್ದಾರೆ. ಟ್ರಕ್ ಮಾಲಕ ಪೊಲೀಸರಿಗೆ ಮಾಹಿತಿ ನೀಡಿ ದೂರು ದಾಖಲಿಸಿದ್ದಾರೆ.

Leave a Comment