೨೨ ಕೆಜಿ ಗಾಂಜಾ ವಶ ೭ ಮಂದಿ ಸೆರೆ

ಬೆಂಗಳೂರು, ನ.೧೪: ಮಾದಕ ವಸ್ತು ಚರಸ್ ಮತ್ತು ಗಾಂಜಾ ಮಾರಾಟ ದಂಧೆಯನ್ನು ಬೇಧಿಸಿರುವ ಆಗ್ನೇಯ ವಿಭಾಗದ ಪೊಲೀಸರು ಏಳು ಮಂದಿ ಕುಖ್ಯಾತ ಆರೋಪಿಗಳನ್ನು ಬಂಧಿಸಿ ೨೨ ಕೆಜಿ ೨೫೦ ಗ್ರಾಂ ಗಾಂಜಾ ಹಾಗೂ ೧೦೦ ಗ್ರಾಂ ಚರಸ್ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಕೇರಳ ಮೂಲದ ಕಲ್ಯಾಣ ನಗರದ ಬಾಬಸಾಬ್ ಪಾಳ್ಯದ ಮುಹಮ್ಮದ್ ಅಶ್ರಫ್ (೨೫) ಹಾಗೂ ಕೇರಳದ ಕಣ್ಣೂರು ಜಿಲ್ಲೆಯ ಕನ್ನಡಿಪುರಂನ ರಾಜೇಶ್ (೨೪)ಪರಂಗಿ ಪಾಳ್ಯದ ರಾಹುಲ್‌ಕುಮಾರ್ ಯಾದವ್(೨೪) ಮಾರತ್‌ಹಳ್ಳಿಯ ರಾಮ್‌ದೀನ್ ಜಾಧವ್(೨೮)ಶ್ಯಾಂಕುಮಾರ್ ಯಾದವ್(೨೮) ಉತ್ತರ ಪ್ರದೇಶದ ಶಾಮಲಿಯ ಶಬ್ಬು(೨೩)ದಾನೇಶ್(೨೩)ಬಂಧಿತ ಆರೋಪಿಗಳಾಗಿದ್ದಾರೆ.
ಮೈಕೋ ಬಡಾವಣೆಯಲ್ಲಿ ಬಳಿ ಗಾಂಜಾ ಹಾಗೂ ಚರಸ್ ಮಾರಾಟ ಮಾಡುತ್ತಿದ್ದ ಬಂಧಿತ ಆರೋಪಿಗಳಾದ ಮುಹಮ್ಮದ್ ಅಶ್ರಫ್ ಹಾಗೂ ರಾಜೇಶ್ ನಿಂದ  ೧೫,೧೦೦ ಕೆ.ಜಿ. ಗಾಂಜಾ ಹಾಗೂ ೧೦೦ ಗ್ರಾಂ ಚರಸ್ ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸುನೀಲ್‌ಕುಮಾರ್ ತಿಳಿಸಿದರು.
ಆರೋಪಿ ಮುಹಮ್ಮದ್ ಅಶ್ರಫ್ ವಿಶಾಖಪಟ್ಟಣದಿಂದ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿ ರಾಜೇಶ್ ಜೊತೆಸೇರಿ ನಗರದ  ವಿವಿಧೆಡೆ ವಿದ್ಯಾರ್ಥಿಗಳಿಗೆ ಮತ್ತು ಸಾಫ್ಟ್‌ವೇರ್ ಇಂಜಿನಿಯರ್‌ಗಳಿಗೆ ಮಾರಾಟ ಮಾಡುತ್ತಿರುವುದು ತನಿಖೆಯಲ್ಲಿ ಕಂಡುಬಂದಿದೆ.
ಮೈಕೋ ಬಡಾವಣೆಯ ಮಡಿವಾಳ ಕೆರೆಯ ಬಳಿ ಗಾಂಜಾ ಮಾರುತ್ತಿದ್ದ ರಾಹುಲ್‌ಕುಮಾರ್ ಯಾದವ್,ರಾಮ್‌ದೀನ್ ಜಾಧವ್,ಶ್ಯಾಂಕುಮಾರ್ ಯಾದವ್ ಶಬ್ಬು,ದಾನೇಶ್‌ನಿಂದ ೭ಕೆಜಿ ೨೫೦ ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಬಿಹಾರ ಹಾಗೂ ಉತ್ತರ ಪ್ರದೇಶ ಮೂಲದವರಾಗಿದ್ದಾರೆ ಬಂಧಿತರಲ್ಲಿ ರಾಹುಲ್‌ಕುಮಾರ್ ಸಿಂಗಸಂದ್ರದ ದಿಲೀಪ್ ಎಂಬಾತನನಿಂದ ಗಾಂಜಾ ಖರೀದಿಸಿಕೊಂಡು ಬಂದು ಚಿಕ್ಕ ಪೊಟ್ಟಣಗಳಾಗಿ ಕಟ್ಟಿ ಮಾರಾಟ ಮಾಡುತ್ತಿದ್ದರು.
ಆಗ್ನೇಯ ವಿಭಾಗದಲ್ಲಿ ಮಾದಕ ವಸ್ತು ಮಾರಾಟ ದಂಧೆಯನ್ನು ಭೇದಿಸಲು ಡಿಸಿಪಿ ಡಾ.ಬೋರಲಿಂಗಯ್ಯ ಅವರು ರಚಿಸಿದ್ದ ಎಸಿಪಿ ಕರಿಬಸವನಗೌಡ ಇನ್ಸ್‌ಪೆಕ್ಟರ್ ಅಜಯ್ ನೇತೃತ್ವ ವಿಶೇಷ ತಂಡ ೭ ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದರು.
ಕಾರ್ಯಾಚರಣೆ ನಡೆಸಿದ ಇನ್ಸ್‌ಪೆಕ್ಟರ್ ಅಜಯ್ ನೇತೃತ್ವ ವಿಶೇಷ ತಂಡವನ್ನು ಸುನೀಲ್‌ಕುಮಾರ್ ಅಭಿನಂದಿಸಿದರು.

Leave a Comment