೧.೯೬ ಕೋ.ರೂ. ದೋಚಿದ ಫೇಸ್‌ಬುಕ್ ಗೆಳತಿ!

ಕಾರವಾರ, ಜೂ.೧೮- ಮುಂಡಗೋಡ ತಾಲೂಕಿನ ಟಿಬೇಟಿಯನ್ ಕಾಲೋನಿಯ ಕರ್ಮ ಖೆಡಪ್ ಎಂಬುವರಿಗೆ ಫೇಸ್‌ಬುಕ್‌ನಲ್ಲಿ ಪರಿಚಯವಾದ ಮಹಿಳೆಯೊಬ್ಬಳು ಬರೋಬ್ಬರಿ ೧.೯೬ ಕೋಟಿ ರೂ. ವಂಚಿಸಿದ್ದಾರೆ. ಅಮೆರಿಕಾದ ಸೇನೆಯಲ್ಲಿ ಉದ್ಯೋಗಿಯಾಗಿರುವುದಾಗಿ ತಿಳಿಸಿದ ಎಸ್ಜಿಟಿ ರೋಲ್ಯಾಂಡ್ ಮಿಶೆಲ್ ಎಂಬ ಮಹಿಳೆ ಕರ್ಮ ಅವರಿಗೆ ಫೇಸ್ಬುಕ್ ಮೂಲಕ ಪರಿಚಯವಾಗಿದ್ದಳು. ಬಳಿಕ ವಾಟ್ಸಪ್ ನಂಬರ್ ಪಡೆದು ಚಾಟ್ ಮಾಡುತ್ತಿದ್ದ ಆಕೆ ತಾನು ಕೂಡ ಅನಾಥೆಯಾಗಿ ಬೆಳೆದಿದ್ದು ನನಗೂ ಭಾರತಕ್ಕೆ ಬಂದು ಅನಾಥ ಮಕ್ಕಳ ಸೇವೆ ಮಾಡುವ ಆಸೆ ಇದೆ ಎಂದಿದ್ದಳು. ಅಲ್ಲದೆ ಹೀಗೆ ಬಂದಾಗ ೨.೫ ಮಿಲಿಯನ್ ಅಮೆರಿಕನ್ ಡಾಲರ್ ಆರ್ಥಿಕ ನೆರವು ನೀಡುವುದಾಗಿ ನಂಬಿಸಿದ್ದಳು. ಹಣವನ್ನು ವಿಲಿಯಮ್ ಜಾನ್ಸನ್ ಎನ್ನುವವರಿಂದ ತಲುಪಿಸುವುದಾಗಿಯೂ ಆಕೆ ನಂಬಿಸಿದ್ದಳು. ಕೆಲದಿನಗಳ ಬಳಿಕ ವಿಲಿಯಮ್ ಜಾನ್ಸನ್ ಎಂಬಾತ ಕರ್ಮ ಅವರಿಗೆ ಕರೆ ಮಾಡಿ ಹಣ ತಲುಪಿಸಲು ವಿವಿಧ ತೆರಿಗೆ ಹಣ ಪಾವತಿಸಬೇಕು ಎಂದು ತಿಳಿಸಿದ್ದಾನೆ. ನಂತರ ಭಾರತಕ್ಕೆ ಹಣ ತರಲು ವಿವಿಧ ಬ್ಯಾಂಕ್ ಖಾತೆಗಳಿಗೆ ಕರ್ಮ ಅವರಿಂದ ಹಣ ಪಾವತಿಸಿಕೊಂಡಿದ್ದಾರೆ. ಆದರೆ ಹಣ ವಂಚಕರ ಖಾತೆಗೆ ಬಿದ್ದ ತಕ್ಷಣದಿಂದ ಚಾಲಾಕಿ ಮಹಿಳೆ ಇವರೊಂದಿಗಿನ ಸಂಪರ್ಕ ಕಡಿತಗೊಳಿಸಿದ್ದಾಳೆ. ಇದರಿಂದ ಕಂಗೆಟ್ಟ ಕರ್ಮ ಈಗ ಆರೋಪಿಗಳನ್ನು ಬಂಧಿಸುವಂತೆ ಹಾಗೂ ಕಳೆದುಕೊಂಡ ಹಣವನ್ನು ಮರಳಿ ಸಿಗುವಂತೆ ಮಾಡಬೇಕೆಂದು ಜಿಲ್ಲಾ ಸೈಬರ್ ಅಪರಾಧ ಠಾಣೆಗೆ ದೂರು ನೀಡಿದ್ದಾರೆ.

Leave a Comment