೧೮ ಉಗ್ರರು, ೧೬ ಪಾಕ್ ಯೋಧರ ಹತ್ಯೆ ಸೇನೆ ಘೋಷಣೆ

ನವದೆಹಲಿ, ಅ. ೨೩- ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶಕ್ಕೆ ಭಾರತೀಯ ಸೇನೆ ಈ ತಿಂಗಳ ೧೯-೨೦ ರಂದು ನುಗ್ಗಿ ನಡೆಸಿದ ಫಿರಂಗಿ ದಾಳಿಯಲ್ಲಿ ಕನಿಷ್ಠ ೧೮ ಮಂದಿ ಉಗ್ರರು ಮತ್ತು ಪಾಕಿಸ್ತಾನದ ೧೬ ಸೈನಿಕರು ಹತರಾಗಿದ್ದಾರೆಂದು ಸೇನಾ ಮೂಲಗಳು ಖಚಿತಪಡಿಸಿವೆ.
ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಈ ಮಾಹಿತಿ ನೀಡಿದ್ದು, ಫಿರಂಗಿ ದಾಳಿಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಂಟಾಗಿರುವ ಪರಿಣಾಮಗಳ ಬಗ್ಗೆ ವಿವರಿಸಿದ್ದಾರೆ. ಆದರೆ, ಹತರಾಗಿರುವವರ ನಿಖರವಾದ ಸಂಖ್ಯೆಯನ್ನು ಈ ಮೂಲಗಳು ನೀಡಿಲ್ಲ.
ಪಿಓಕೆಯ ನೀಲಂ ಕಣಿವೆ ಪ್ರದೇಶದಲ್ಲಿ ಭಾರತೀಯ ಸೇನೆ ಈ ಫಿರಂಗಿ ದಾಳಿ ನಡೆಸಿದ್ದು. ಜೈಷ್-ಎ-ಮೊಹ್ಮದ್ ಸಂಘಟನೆಯ ಎಲ್ಲ ನೆಲೆಗಳನ್ನು ಧ್ವಂಸ ಮಾಡಲಾಗಿದೆ. ಸೇನೆಯ ಈ ದಾಳಿಯಲ್ಲಿ ೧೮ ಉಗ್ರರು ಮತ್ತು ಪಾಕಿಸ್ತಾನದ ೧೬ ಸೈನಿಕರು ಸತ್ತಿದ್ದಾರೆ ಎಂದು ಈ ಅಧಿಕಾರಿ ತಿಳಿಸಿದ್ದಾರೆ.
ಕಳೆದ ಅ. ೧೯ ಮತ್ತು ೨೦ ರಂದು ಪಾಕ್ ಸೇನೆಯ ಅಪ್ರಚೋದಿತ ಗುಂಡಿನ ದಾಳಿಗೆ ಭಾರತೀಯ ಸೈನಿಕರು ಪ್ರತಿದಾಳಿ ನಡೆಸಿ ಗಡಿ ನುಸುಳಲು ಪ್ರಯತ್ನಿಸುತ್ತಿದ್ದ ಉಗ್ರರನ್ನು ಸದೆಬಡಿದು ಪಾಕ್ ಆಕ್ರಮಿತ ಕಾಶ್ಮೀರದೊಳಗೆ ನುಗ್ಗಿ ಅಲ್ಲಿದ್ದ ಉಗ್ರರ ನೆಲೆಗಳನ್ನು ನಾಶಪಡಿಸಿದ್ದರು.
ಪಾಕಿಸ್ತಾನ ಭಾರತದ ಈ ಸೇನಾ ದಾಳಿಯನ್ನು ತಳ್ಳಿ ಹಾಕಿ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಭಾರತೀಯ ಸೇನೆ ಬಂದೇ ಇಲ್ಲ, ಯಾವುದೇ ದಾಳಿಗಳೂ ನಡೆದಿಲ್ಲ, ಪಾಕ್‌ನ ಸೈನಿಕರೂ ಸತ್ತಿಲ್ಲ, ಬೇಕಾದರೆ ವಿವಿಧ ದೇಶಗಳ ರಾಜತಾಂತ್ರಿಕರನ್ನು ದಾಳಿ ನಡೆದಿದೆ ಎಂದು ಭಾರತ ಹೇಳುತ್ತಿರುವ ಭಾಗಕ್ಕೆ ಕರೆದೊಯ್ಯಲು ಸಿದ್ಧ ಎಂದು ಪಾಕಿಸ್ತಾನ ಹೇಳಿತ್ತು.
ಪಾಕ್ ಆಕ್ರಮಿತ ಪ್ರದೇಶದಲ್ಲಿ ಯಾವುದೇ ಉಗ್ರರ ನೆಲೆಯೇ ಇಲ್ಲ, ಧ್ವಂಸ ಮಾಡುವ ಪ್ರಶ್ನೆ ಎಲ್ಲಿ ಎಂದೂ ಪಾಕಿಸ್ತಾನ ಹೇಳಿ ಭಾರತ ಸೇನೆಯ ದಾಳಿ, ಸೈನಿಕರ ಸಾವನ್ನು ತಳ್ಳಿ ಹಾಕಿತ್ತು.
ಭಾರತೀಯ ಭೂ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಈ ದಾಳಿ ನಡೆದ ದಿನ ಅಂದರೆ ಭಾನುವಾರವೇ ಎರಡು ಬಾರಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸಿದ ದಾಳಿಗೆ ಜೆಇಎಂ ಮತ್ತು ಇತರ ಜಿಹಾದಿಗಳ ನೆಲೆ ಧ್ವಂಸ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದರು. ಆಗ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಯಾವುದೇ ಉಗ್ರರ ನೆಲೆಗಳನ್ನು ಬಿಡಬೇಡಿ, ಧ್ವಂಸ ಮಾಡಿ, ಆದರೆ, ಯಾವುದೇ ನಾಗರಿಕರಿಗೆ ತೊಂದರೆಯಾಗದಂತೆ ಕಟ್ಟೆಚ್ಚರ ವಹಿಸಿ ಎಂದು ಸೂಚಿಸಿದ್ದರು. ಅದರಂತೆ ಭಾರತೀಯ ಸೇನೆ ಮರುದಿನವು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಒಳ ನುಗ್ಗಿ ಉಗ್ರರ ನೆಲೆಯನ್ನು ಧ್ವಂಸಗೊಳಿಸಿತ್ತು. ಪಾಕ್ ಮಾತ್ರ ಯಾವುದೇ ದಾಳಿ ನಡೆದಿಲ್ಲ ಎಂದೇ ವಾದಿಸುತ್ತಿತ್ತು. ಈಗ ಭಾರತೀಯ ಸೇನೆಯ ಮೂಲಗಳು ದಾಳಿ ನಡೆದಿರುವುದನ್ನು ಖಚಿತಪಡಿಸಿ, ಈ ದಾಳಿಯಲ್ಲಿ ೧೮ ಉಗ್ರರು ಮತ್ತು ೧೬ ಪಾಕ್ ಸೈನಿಕರು ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ.
ನೀಲಂಕಣಿವೆಯ ಜುರಾ, ಅಥಂಕಾಮ್ ಮತ್ತು ಕುಂದಲ್ ಶಾಹೀರ್‌ನಲ್ಲಿನ ನೆಲೆಗಳನ್ನು ಧ್ವಂಸ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ದಾಳಿಗೆ ಮುನ್ನ ಪಾಕಿಸ್ತಾನಿ ಸೈನಿಕರು, ಕರ್ನಾ ಸೆಕ್ಟರ್‌ನಲ್ಲಿರುವ ಭಾರತೀಯ ನೆಲೆ ಮತ್ತು ನಾಗರಿಕ ವಸತಿ ಪ್ರದೇಶಗಳ ಮೇಲೆ ಅಪ್ರಚೋದಿತ ದಾಳಿ ನಡೆಸಿ ಇಬ್ಬರು ಭಾರತೀಯ ಯೋಧರು ಮತ್ತು ಓರ್ವ ನಾಗರಿಕನನ್ನು ಬಲಿ ತೆಗೆದುಕೊಂಡಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ ಪಾಕ್ ಆಕ್ರಮಿತ ಪ್ರದೇಶದ ಮೇಲೆ ದಾಳಿ ನಡೆಸಿತ್ತು.
ಕನಿಷ್ಠ ೬೦ ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರದೊಳಕ್ಕೆ ನುಸುಳಿದ್ದಾರೆ ಮತ್ತು ಇನ್ನೂ ೫೦೦ ಮಂದಿ ನುಸುಳಿ ಬರಲು ಕಾಯುತ್ತಿದ್ದಾರೆ ಎಂಬ ಮಾಹಿತಿಯನ್ನೂ ಜಾಗೃತ ದಳದ ಮೂಲಗಳು ಸರ್ಕಾರಕ್ಕೆ ನೀಡಿದ್ದವು.

Leave a Comment