೧೭ ಹಸುಗಳು ಹಸಿವಿಗೆ ಬಲಿ

ಭೂಪಾಲ್/ಗ್ವಾಲಿಯರ್, ಅ. ೧೮- ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯುಂಟುಮಾಡುತ್ತಿವೆ ಎಂದು ಮನೆಯೊಂದರಲ್ಲಿ ಕೂಡಿಹಾಕಿದ್ದ ಅಂದಾಜು ೧೭ ಹಸುಗಳು ಮೇವು – ನೀರಿಲ್ಲದೆ, ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯಲ್ಲಿ ನಡೆದಿದೆ.
ಗ್ವಾಲಿಯರ್ ಜಿಲ್ಲೆಯ ಹೆದ್ದಾರಿ ಸಂಚಾರಕ್ಕೆ ಅಡಚಣೆ ಉಂಟುಮಾಡುತ್ತಿವೆ ಎಂದು ಸ್ಥಳೀಯ ಶಾಲೆಯ ಕೊಠಡಿಯೊಂದರಲ್ಲಿ ವ್ಯಕ್ತಿಯೊಬ್ಬರು, ಅಂದಾಜು ೧೭ ಹಸುಗಳನ್ನು ಕೂಡಿ ಬೀಗಹಾಕಿದ್ದರು. ಆದರೆ ಹಸುಗಳಿಗೆ ಸೂಕ್ತ ಕಾಲಕ್ಕೆ ಮೇವು, ನೀರು ಏನನ್ನೂ ಒದಗಿಸದ ಕಾರಣ, ೧೭ ಹಸುಗಳು ಹಸಿವಿನಿಂದ ಮೃತಪಟ್ಟಿರುವುದಾಗಿ ಜಿಲ್ಲಾ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಕಳೆದ ಬುಧವಾರ ಈ ಘಟನೆ ಬೆಳಗಿಗೆ ಬಂದಿದ್ದು, ಸತ್ತ ಹಸುಗಳನ್ನು ಮಣ್ಣಿನಲ್ಲಿ ಹೂಳಲು ಪ್ರಯತ್ನ ನಡೆಸುತ್ತಿದ್ದ ವೇಳೆ ಘಟನೆ ಪತ್ತೆಯಾಗಿದೆ. ಹಸುಗಳನ್ನು ಹೂಳಲು ಜೆಸಿಬಿ ಯಂತ್ರ ಬಳಸಿ ಹಳ್ಳ ತೋಡುತ್ತಿದ್ದರು ಎಂದು ತಿಳಿಸಿರುವ ಅಧಿಕಾರಿಗಳು, ಈ ಪ್ರದೇಶ ಉತ್ತರ ಭೂಪಾಲ್‌ನ ೪೬೦ ಕಿ.ಮೀ. ದೂರದ ದಾಬ್ರಾದಲ್ಲಿ ನಡೆದಿದೆ.
ಮುಖ್ಯಮಂತ್ರಿ ಕಮಲನಾಥ್ ಅವರು ಘಟನೆ ಕುರಿತಂತೆ, ತನಿಖೆ ನಡೆಸಲು ಸೂಚಿಸಿದ್ದಾರೆ. ಪ್ರಕರಣ ಕುರಿತಂತೆ ಮಧ್ಯಪ್ರದೇಶದ ಗೋಹತ್ಯಾ ನಿಷೇಧ ಕಾನೂನಿನಡಿ ಪ್ರಕರಣ ದಾಖಲಿಸಿ, ಎಫ್‌ಐಆರ್ ಕೂಡ ಸಿದ್ಧಪಡಿಸಲಾಗಿದೆ.
ಈ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಬಹುದಾದ ಸಾಧ್ಯತೆ ಪರಿಗಣಿಸಿ ಹೆಚ್ಚು ಸಂಖ್ಯೆಯ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನವನೀತ್ ಆರ್.ಸಿಂಗ್ ತಿಳಿಸಿದ್ದಾರೆ. ಗೋವುಗಳನ್ನು ಗೌರವಯುತವಾಗಿ ಗ್ರಾಮದ ಹೊರ ಭಾಗದಲ್ಲಿ ಹೂಳುವ ವ್ಯವಸ್ಥೆ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ೭೫ರಲ್ಲಿ ಈ ಹಸುಗಳು ಸಂಚಾರಕ್ಕೆ ಅಡ್ಡಿ ಮಾಡುತ್ತಿವೆ ಎಂದು ಸಾಮ್ನಾದಾನ್ ಗ್ರಾಮಸ್ಥರು ಅವುಗಳನ್ನು ಸರ್ಕಾರಿ ಪ್ರೌಢಶಾಲೆಯ ಕೊಠಡಿಯೊಂದರಲ್ಲಿ ಕಳೆದ ೧ ವಾರದ ಹಿಂದೆ ಕೂಡಿ ಹಾಕಿದ್ದರು ಎಂದು ದಾಬ್ರಾನ್ ಉಪ ವಿಭಾಗ ದಂಡಾಧಿಕಾರಿ ರಾಘವೇಂದ್ರಪಾಂಡೆ ತಿಳಿಸಿದ್ದಾರೆ.
ಈ ಗ್ರಾಮಸ್ಥರು ಗೋವುಗಳಿಗೆ ಮೇವು ಮತ್ತು ನೀರನ್ನು ನೀಡಿಲ್ಲ, ಗೋವುಗಳು ಮರಣ ಹೊಂದಿದ ನಂತರ ಶಾಲೆಯ ಪ್ರದೇಶದಲ್ಲಿ ದುರ್ವಾಸನೆ ಉಂಟಾಗಿತ್ತು. ನಂತರ ಗ್ರಾಮಸ್ಥರು ಶಾಲಾ ಪ್ರದೇಶದಲ್ಲೆ ಹಸುಗಳನ್ನು ಹೂಳಲು ಪ್ರಯತ್ನಿಸಿದ್ದರು.
ಕೆಲ ಗೋ ರಕ್ಷಕರು ಹಾಗೂ ವಿಶ್ವಹಿಂದೂಪರಿಷತ್ ನಾಯಕರು ಗಲಾಟೆ ಆರಂಭಿಸಿದರು. ನಂತರ ಜಿಲ್ಲಾಡಳಿತ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ಸಂದರ್ಭವನ್ನು ತಿಳಿಗೊಳಿಸಿದ್ದಾಗಿ ತಿಳಿಸಿದ್ದಾರೆ.
ಗ್ವಾಲಿಯರ್ ಜಿಲ್ಲಾಧಿಕಾರಿ ಅನುರಾಗ್ ಚೌಧರಿ ಪ್ರಕರಣ ಕುರಿತಂತೆ ಶಾಲಾ ಆಡಳಿತದ ವಿರುದ್ಧ ಹಾಗೂ ಗ್ರಾಮದ ಸರ್ಪಂಚ್ ಮತ್ತು ಗ್ರಾಮಸ್ಥರ ವಿರುದ್ಧ ತನಿಖೆ ನಡೆಸುವಂತೆ ಸೂಚಿಸಿದ್ದಾರೆ. ನಂತರ ಉಪ ವಿಭಾಗೀಯ ದಂಡಾಧಿಕಾರಿಗೆ ವರದಿಯನ್ನು ಸಲ್ಲಿಸಿದ್ದಾರೆ.
ಇಂತಹ ಘಟನೆಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಕಮಲ್‌ನಾಥ್ ಸಹ ಅಭಿಪ್ರಾಯ ಪಟ್ಟಿದ್ದಾರೆ.

Leave a Comment