೧೬ನೇ ಗ್ರಾನ್‌ಸ್ಲಾಮ್ ಪ್ರಶಸ್ತಿ ಗೆದ್ದ ವಿಶ್ವ ನಂ.೧ ಆಟಗಾರ : ನಡಾಲ್ ಯುಎಸ್ ಓಪನ್ ಚಾಂಪಿಯನ್

ನ್ಯೂಯಾರ್ಕ್, ಸೆ.೧೧: ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಪ್ರತಿಷ್ಠೆಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ವಿಶ್ವ ನಂ.೧ ತಾರೆ ಸ್ಪೆನ್‌ನ ರಫೆಲ್ ನಡಾಲ್ ಪ್ರಶಸ್ತಿ ಮುಡಿಗೇರಿಕೊಂಡಿದ್ದಾರೆ. ಇಲ್ಲಿನ ಆರ್ಥರ್ ಆಷೆ ಕ್ರೀಡಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರ ಸಮ್ಮುಖದಲ್ಲಿ ನಡೆದ ಫೈನಲ್‌ನಲ್ಲಿ ನಡಾಲ್, ೩೨ನೇ ಶ್ರೇಯಾಂಕಿತ ಆಟಗಾರ ದಕ್ಷಿಣ ಆಫ್ರಿಕಾದ ಕೆವಿನ್ ಆಂಡರ್ಸ್‌ನ್‌ರನ್ನು ೬-೩, ೬-೩, ೬-೪ ಅಂತರದಲ್ಲಿ ನೇರ ಸೆಟ್‌ಗಳಿಂದ ಮಣಿಸಿ ಮೂರನೇ ಬಾರಿಗೆ ಯುಎಸ್ ಓಪನ್ ಗೆದ್ದು ಸಂಭ್ರಮಿಸಿದರು.

೫೨ ವರ್ಷಗಳ ಬಳಿಕ ಗ್ರ್ಯಾನ್ ಸ್ಲ್ಯಾಮ್ ಟೂರ್ನಿಯ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಪ್ರತಿನಿಧಿಸುವ ಅವಕಾಶ ಪಡೆದಿದ್ದ ಆಂಡರ್‌ಸನ್ ಯಾವುದೇ ಹಂತದಲ್ಲೂ ನಡಾಲ್‌ಗೆ ಸವಾಲಾಗಲೇ ಇಲ್ಲ. ಪಂದ್ಯದ ಆರಂಭದಲ್ಲಿ ೨-೧ ಅಂಕಗಳಿಂದ ಮುನ್ನಡೆ ಗಳಿಸುವಲ್ಲಿ ಆಂಡರ್‌ಸನ್ ಸಫಲರಾದೂ ಸಹ ಆ ಬಳಿಕ ನಡಾಲ್ ಆಟದ ಅಬ್ಬರದ ಮುಂದೆ ಅಂಡರ್‌ಸನ್ ಮಂಕಾದರು. ಆಂಡರ್‌ಸನ್ ವಿರುದ್ಧದ ಹಿಂದಿನ ನಾಲ್ಕು ಪಂದ್ಯಗಳಲ್ಲೂ ಗೆದ್ದಿದ್ದ ನಡಾಲ್ ತಮ್ಮ ಗೆಲುವಿನ ದಾಖಲೆಯನ್ನು ೫-೦ ಏರಿಸಿಕೊಂಡರು.

ಪಂದ್ಯದ ಬಳಿಕ ಪ್ರತಿಕ್ರಿಯಿಸಿದ ಆಂಡರ್‌ಸನ್, ‘ನಾನು ನಡಾಲ್ ಆಟವನ್ನು ನೋಡುತ್ತಲೇ ಬಂದಿದ್ದೆನೆ. ನಡಾಲ್ ಟೆನಿಸ್ ಆಟವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದಿದ್ದಾರೆ ಎಂದರು.

೩೧ ವರ್ಷದ ಸ್ಪೇನ್‌ನ ಆಟಗಾರ ನಡಲ್ ೨೦೧೦ ಮತ್ತು ೨೦೧೩ರಲ್ಲಿ ಇಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದರು. ವರ್ಷದ ಮೂರನೇ ಹಾಗೂ ವೃತ್ತಿ ಜೀವನದ ೨೩ನೇ ಗ್ರ್ಯಾನ್‌ಸ್ಲಾಮ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ನಡಾಲ್ ೧೬ನೇ ಪ್ರಶಸ್ತಿ ಗೆಲ್ಲುವ ಮೂಲಕ ೧೯ ಗ್ರ್ಯಾನ್‌ಸ್ಲಾಮ್ ಗೆದ್ದಿರುವ ಫೆಡರರ್ ದಾಖಲೆ ಬ್ರೇಕ್ ಮಾಡುವತ್ತ ಮುನ್ನುಗ್ಗಿದ್ದಾರೆ. ನಡಾಲ್, ಈ ಋತುವಿನಲ್ಲಿ ೧೦ನೇ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದುಕೊಂಡ ದಾಖಲೆ ಹೊಂದಿದ್ದಾರೆ.

 

Leave a Comment