೧೦೦೦ರೂ. ನಿರುದ್ಯೋಗ ಭತ್ಯೆ ನಾಯ್ಡು ಘೋಷಣೆ

ಅಮರಾವತಿ (ಆಂಧ್ರ), ಸೆ. ೧೨: ಮಾಸಿಕ ೧ ಸಾವಿರ ರೂ. ನಿರುದ್ಯೋಗ ಭತ್ಯೆ ನೀಡುವ ‘ಯುವ ನೇಸ್ತಂ’ ಯೋಜನೆಯನ್ನು ಅ. ೨ರ ಗಾಂಧಿ ಜಯಂತಿಯಂದು ಜಾರಿಗೆ ತರಲಾಗುವುದು ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಘೋಷಿಸಿದ್ದಾರೆ.

ಯುವ ಜನಾಂಗಕ್ಕೆ ಕೌಶಲ್ಯಾಭಿವೃದ್ಧಿ ಮಾಡುವ ಮೂಲಕ ಅವರ ಬಲವರ್ಧನೆ, ಸ್ವಉದ್ಯೋಗ ಅವಕಾಶಗಳು ಮತ್ತು ಆರ್ಥಿಕ ಅಭಿವೃದ್ಧಿಗೆ ಯುವ ಜನಾಂಗವನ್ನು ಬಳಸಿಕೊಳ್ಳುವ ಮುಖ್ಯ ಉದ್ದೇಶದಿಂದ ಈ ಯೋಜನೆ ಆರಂಭಿಸಲಾಗಿದೆ ಎಂದು ನಾಯ್ಡು ಸಮರ್ಥಿಸಿಕೊಂಡಿದ್ದಾರೆ.

‘ಯುವ ನೇಸ್ತಂ’ ಯೋಜನೆ ಬಗ್ಗೆ ವಿಧಾನ ಪರಿಷತ್‌ನಲ್ಲಿ ಚರ್ಚಿಸಿದ ಅವರು, ಯವ ಜನಾಂಗ ಸಕಾರಾತ್ಮಕವಾಗಿ ನಡೆದುಕೊಳ್ಳಬೇಕು; ತಂತ್ರಜ್ಞಾನ ಬಳಸಿಕೊಂಡು ಕೌಶಲ್ಯ ಬೆಳೆಸಿಕೊಳ್ಳಲು ನಿರಂತರ ಹೊಸದನ್ನು ಕಲಿಯುವ ಹಂಬಲ ಹೊಂದಬೇಕು ಎಂದು ಕಿವಿಮಾತು ಹೇಳಿದರು.

ಸರ್ಕಾರವು ೧೦ ಲಕ್ಷ ಯುವಕರಿಗೆ ಕೌಶಲ್ಯ ತರಬೇತಿ ನೀಡುವ ಮೂಲಕ ಅವರಿಗೆ ಉದ್ಯೋಗಾವಕಾಶ ಕಲ್ಪಿಸುತ್ತಿದೆ; ವಿವಿಧ ತರಬೇತಿ ನೀಡಲೆಂದೇ ೨೬೦ ತರಬೇತಿ ಪಾಲುದಾರರನ್ನು ನೇಮಿಸಲಾಗಿದೆ. ಇಂತಹ ತರಬೇತಿ ಪಾಲುದಾರರನ್ನು ಸಿಂಗಪೂರ, ಜರ್ಮನಿ ಹಾಗೂ ಇಂಗ್ಲೆಂಡ್‌ಗಳಿಂದಲೂ ನೇಮಿಸಿಕೊಳ್ಳಲಾಗಿದೆ ಎಂದು ನಾಯ್ಡು ಸದನದಲ್ಲಿ ವಿವರಣೆ ನೀಡಿದರು.

Leave a Comment