ಹೋಲಸೇಲ್ ತರಕಾರಿ ಮಾರಾಟಕ್ಕೆ ಸ್ಥಳ ನಿಗದಿ: ಜಿಲ್ಲಾಧಿಕಾರಿ

ಬೆಳಗಾವಿ, ಏ.೩-ಕರೋನಾ ಹಿನ್ನೆಲೆಯಲ್ಲಿ ಇಲ್ಲಿನ ಎಪಿಎಂಸಿ ಪ್ರಾಂಗಣದಲ್ಲಿ ಜನಸಂದಣಿ ಕಡಿಮೆಗೊಳಿಸುವ ದೃಷ್ಟಿಯಿಂದ ನಗರದ ಹೊರವಲಯದ ನಾಲ್ಕು ದಿಕ್ಕುಗಳಲ್ಲಿ ಪ್ರತ್ಯೇಕ ಹೋಲಸೇಲ್ ತರಕಾರಿ ಮಾರಾಟಕ್ಕೆ ಸ್ಥಳ ನಿಗದಿಪಡಿಸಲಾಗಿದ್ದು, ಸೋಮವಾರದಿಂದ ನಿಗದಿತ ನಾಲ್ಕು ಸ್ಥಳಗಳಲ್ಲಿ ಮಾತ್ರವೇ ತರಕಾರಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದರು.
ಎಪಿಎಂಸಿ ಕಚೇರಿಯಲ್ಲಿಂದು  ನಡೆದ ವರ್ತಕರ ಸಭೆಯಲ್ಲಿ ಈ ವಿಷಯ ತಿಳಿಸಿದ ಅವರು ಸೋಮವಾರದಿಂದ ನಗರದ ಹೊರವಲಯದ ಹಿಂಡಾಲ್ಕೋ ಮೈದಾನ, ಆರ್.ಟಿ.ಓ ಮೈದಾನ, ಪೊದ್ದಾರ್ ಶಾಲಾ ಮೈದಾನ ಹಾಗೂ ಬಿ.ಎಸ್.ಯಡಿಯೂರಪ್ಪ ಮಾರ್ಗದ ಗಾಳಿಪಟ ಉತ್ಸವ(ಮಾಲಿನಿ ಸಿಟಿ) ಮೈದಾನ ಹೀಗೆ ನಾಲ್ಕು ದಿಕ್ಕುಗಳಲ್ಲಿ ನಿಗದಿಪಡಿಸಿದ ಸ್ಥಳಗಳಲ್ಲಿ ಮಾತ್ರವೇ ತರಕಾರಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ನಿಗದಿತ ಈ ಸ್ಥಳಗಳಲ್ಲಿ ತಕ್ಷಣವೇ ವ್ಯಾಪಾರಕ್ಕೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವಂತೆ ಎಪಿಎಂಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಭಾನುವಾರದವರೆಗೆ ಈಗಿರುವ ವ್ಯವಸ್ಥೆಯಲ್ಲಿಯೇ ವಹಿವಾಟು ನಡೆಸಬೇಕು. ತದನಂತರ ನಗರದ ಹೊರ ವಲಯದಲ್ಲಿ ಗುರುತಿಸಲಾಗುವ ನಿಗದಿತ ಮೂರ್ನಾಲ್ಕು ಸ್ಥಳಗಳಲ್ಲಿಯೇ ವಹಿವಾಟು ನಡೆಸಬೇಕು ಎಂದು ತಿಳಿಸಿದರು.
ಉಳ್ಳಾಗಡ್ಡಿ, ಆಲೂಗಡ್ಡೆ ಮತ್ತು ಗೆಣಸು ಮಾತ್ರ ಮುಖ್ಯ ಪ್ರಾಂಗಣದಲ್ಲಿ ವಹಿವಾಟು ನಡೆಸಬೇಕು. ಉಳಿದ ತರಕಾರಿ ಮಾರಾಟವನ್ನು ನಾಲ್ಕು ಕಡೆ ಗುರುತಿಸಲಾಗುವ ಸ್ಥಳಗಳಲ್ಲಿಯೇ ವ್ಯಾಪಾರ ನಡೆಸಬೇಕು ಎಂದು ತಿಳಿಸಿದರು.
ಕಾನೂನು ಕ್ರಮದ ಎಚ್ಚರಿಕೆ:
ತರಕಾರಿ ಸೇರಿಂದತೆ ಅಗತ್ಯ ಸಾಮಗ್ರಿಗಳ ಪೂರೈಕೆಯಲ್ಲಿ ವಿನಾಕಾರಣ ವ್ಯತ್ಯಯ ಉಂಟು ಮಾಡಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಕೂಡ ಹಿಂದೇಟು ಹಾಕುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಎಚ್ಚರಿಕೆ ನೀಡಿದರು.
ಪ್ರತಿದಿನ ಎಲ್ಲ ಬಗೆಯ ವಹಿವಾಟು ಮಾಡುವ ಬದಲು ಒಂದು ದಿನ ತರಕಾರಿ, ಒಂದು ದಿನ ಕಾಳುಕಡಿ ಹೀಗೆ ದಿನವಾರು ವಹಿವಾಟು ನಿಗದಿಪಡಿಸಿದರೆ ಜನಸಂದಣಿ ನಿಯಂತ್ರಣ ಸಾಧ್ಯ ಎಂದು ಕೆಲವರು ಅಭಿಪ್ರಾಯಪಟ್ಟರು.

Leave a Comment