ಹೋರಿ ಬೆದರಿಸುವ ಸ್ಪರ್ಧೆ

ಮುಂಡಗೋಡ,ನ.9- ಮುಂಡಗೋಡದ ಹಳೂರ ಓಣಿಯಲ್ಲಿ ಗುರುವಾರ ದೀಪಾವಳಿ ಹಬ್ಬದ ನಿಮಿತ್ತ ಹೋರಿ ಬೆದರಿಸುವ ಸ್ಪರ್ಧೆ ಅತ್ಯಂತ ಸಂಭ್ರಮದಿಂದ ನಡೆಯಿತು.
ಮಲೆನಾಡಿನ ಸೊಗಡಿನಲ್ಲಿ ಅಡಕವಾಗಿರುವ ಹೋರಿ ಬೆದರಿಸುವ ಸ್ಪರ್ಧೆಯನ್ನು ಮುಂಡಗೋಡ ಪಟ್ಟಣದಲ್ಲಿ ಮತ್ತು ಹಳ್ಳಿಗಳಲ್ಲಿ ಸಾಂಪ್ರದಾಯಿಕವಾಗಿ ರೈತರು ಪ್ರತಿ ವರ್ಷವೂ ಆಚರಿಸುತ್ತಾ ಬಂದಿದ್ದಾರೆ. ಹೋರಿಗಳನ್ನು ಬೆದರಿಸುವ ಸಂಪ್ರದಾಯ ಪೂರ್ವಜರಿಂದಲೂ ಬಳುವಳಿಯಾಗಿ ಬಂದಿದ್ದು ಇಂದಿನ ಪೀಳಿಗೆಗೆ ಬೆರಗುಗೊಳಿಸುವ ಆಟವಾಗಿದೆ.
ಪಟ್ಟಣದ ಹಳೂರ ಓಣಿಯಲ್ಲಿ ಗುರುವಾರ ಬಲಿಪಾಡ್ಯ ದಿನದಂದು ಹೋರಿಗಳಿಗೆ ಮತ್ತು ಅವುಗಳಿಗೆ ಕಟ್ಟಿದ ಕೊಬ್ಬರಿಯನ್ನು ಹರಿಯುವ ಯುವಕರಿಗೆ ಸಂಭ್ರಮವೋ ಸಂಭ್ರಮ. ಒಂದು ಹೋರಿಯನ್ನು ಹಿಡಿಯಲು ಸುಮಾರು 15-20ಯುವಕರು ಸಾಲುಗಟ್ಟಿ ನಿಂತಿದ್ದರು. ಅವುಗಳಲ್ಲಿ ಕೆಲವು ಹೋರಿಗಳು ಅವರ ಕೈಗೆ ಸಿಕ್ಕರೆ ಮತ್ತೆ ಕೆಲವು ತಪ್ಪಿಸಿಕೊಂಡು ಹೋದವು. ಹೋರಿಗಳಿಗೆ ಬಣ್ಣ ಬಣ್ಣದ ಹಗ್ಗ, ಕೊಂಬುಗಳಿಗೆ ವಿವಿಧ ಬಣ್ಣ, ನಾದಮಯ ಗೆಜ್ಜೆ, ಕೊಬ್ಬರಿ ಬಟ್ಟಲು, ಬಗೆ ಬಗೆಯ ರಿಬ್ಬನ್, ಬಲೂನ್, ಗೊಂಡೆ ಹೂಗಳಿಂದ ಶೃಂಗರಿಸಲಾಗಿತ್ತು.
ತಾಲೂಕಿನ ಸುತ್ತಮುತ್ತಲಿನ ಹಳ್ಳಿಗಳಿಂದ ರೈತರು ಹೋರಿಗಳನ್ನು ಸ್ಪರ್ಧೆಯ ಕಣಕ್ಕಿಳಿಸಿದ್ದರು. ಸ್ಪರ್ಧೆಯಲ್ಲಿ ಗೆದ್ದ ಹೋರಿಗಳಿಗೆ ಬಹುಮಾನ ನೀಡಲಾಯಿತು. ಅದೇ ರೀತಿಯಾಗಿ ಕೊಬ್ಬರಿಯನ್ನು ಹರಿದ ಯುವಕರಿಗೂ ಬಹುಮಾನ ನೀಡಲಾಯಿತು.

Leave a Comment