ಹೋಟೇಲ್, ಬಾರ್‌ಗಳಲ್ಲಿ ಧೂಮಪಾನ ನಿಷೇದ

ಬೆಂಗಳೂರು,ಆ.೩೦- ನಗರದಲ್ಲಿರುವ ಹೋಟೆಲ್, ಬಾರ್, ರೆಸ್ಟೋರೆಂಟ್, ಕ್ಲಬ್‌ಗಳಲ್ಲಿ ಇನ್ನು ಮುಂದೆ ಧೂಮಪಾನಕ್ಕೆ ಪ್ರತ್ಯೇಕ ಸ್ಥಳವನ್ನು (ಸ್ಮೋಕಿಂಗ್ ಝೋನ್) ನಿರ್ಮಿಸುವುದು ಕಡ್ಡಾಯವಾಗಲಿದೆ.
ಸ್ಮೋಕಿಂಗ್ ಝೋನ್ ಹೊರತುಪಡಿಸಿ ಬೇರೆ ಸ್ಥಳಗಳಲ್ಲಿ ಧೂಮಪಾನ ಮಾಡಿದರೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಬಿಬಿಎಂಪಿ ಆದೇಶ ನೀಡಿದೆ.
ಧೂಮಪಾನ ವಲಯದಲ್ಲಿ ಯಾವುದೇ ರೀತಿಯ ತಿಂಡಿ, ಊಟ, ಮದ್ಯ, ಸಿಗರೇಟು, ನೀರು, ಟೀ, ಕಾಫಿ ಇತ್ಯಾದಿಗಳನ್ನು ಸರಬರಾಜು ಮಾಡಬಾರದು. ೩೦ಕ್ಕೂ ಹೆಚ್ಚು ಆಸನಗಳಿರುವ ಬಾರ್ ಅಂಡ್ ರೆಸ್ಟೋರೆಂಟ್, ಹೋಟೆಲ್, ಪಬ್, ಬಾರ್‌ಕ್ಲಬ್‌ಗಳಲ್ಲಿ ಧೂಮಪಾನ ವಲಯವನ್ನು ಕಡ್ಡಾಯವಾಗಿ ನಿರ್ಮಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಅಪ್ರಾಪ್ತರು ಮತ್ತು ಧೂಮಪಾನ ಮಾಡದ ಸಾರ್ವಜನಿಕರಿಗೆ ಧೂಮಪಾನ ವಲಯಕ್ಕೆ ಪ್ರವೇಶ ನೀಡಬಾರದು. ಅಲ್ಲಿ ಕುರ್ಚಿ, ಬೆಂಕಿಪೊಟ್ಟಣ, ಆಶ್ ಟ್ರೇ ಇತ್ಯಾದಿ ಧೂಮಪಾನ ಪ್ರಚೋದನಕಾರಿ ವಸ್ತುಗಳನ್ನು ಗ್ರಾಹಕರಿಗೆ ಒದಗಿಸಬಾರದು. ಈ ನಿಯಮಗಳನ್ನು ಉಲ್ಲಂಘಿಸಿದರೆ ಪರವಾನಗಿ ರದ್ದುಮಾಡಲಾಗುವುದು ಎಂದೂ ಎಚ್ಚರಿಕೆ ನೀಡಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿದರೆ ಆಗಬಹುದಾದ ಬೆಂಕಿ ಅವಘಡದಿಂದ ಸಾರ್ವಜನಿಕರನ್ನು ರಕ್ಷಿಸಬಹುದು ಎಂದು ಕರ್ನಾಟಕ ಅಗ್ನಿಶಾಮಕ ಹಾಗೂ ತುರ್ತು ಸೇವಾ ಇಲಾಖೆಗಳೂ ತಿಳಿಸಿವೆ.
ಧೂಮಪಾನ ಪ್ರದೇಶಗಳಲ್ಲಿ ಅನುಸರಿಸಬೇಕಾದ ನಿಯಮಗಳು:
ಅಪ್ರಾಪ್ತರು ಹಾಗೂ ಧೂಮಪಾನ ಮಾಡದಿರುವವರಿಗೆ ಧೂಮಪಾನ ಪ್ರದೇಶದೊಳಗೆ ಅವಕಾಶ ನೀಡಬಾರದು, ಧೂಮಪಾನ ವಲಯದಲ್ಲಿ ತಿಂಡಿ, ಊಟ, ಮದ್ಯ, ನೀರು, ಟೀ, ಕಾಫಿ ಸರಬರಾಜು ಮಾಡಬಾರದು, ಕುರ್ಚಿ, ಟೇಬಲ್, ಬೆಂಕಿಪೊಟ್ಟಣ, ಆಶ್ ಟ್ರೇ ಒದಗಿಸಬಾರದು ಹಾಗೂ ಧೂಮಪಾನ ಪ್ರದೇಶ ಹೊಂದಲು ಪಾಲಿಕೆ ತಂಬಾಕು ನಿಯಂತ್ರಣ ಕೋಶದಿಂದ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು.

Leave a Comment