ಹೊಸ ಸಿಎಂ ಸಾಧ್ಯತೆ- ಎಸ್.ರಾಮಪ್ಪ

ಬೆಂಗಳೂರು, ಜುಲೈ 11: ಮೈತ್ರಿ ಸರ್ಕಾರಕ್ಕೆ ಏನೂ ಆಗಲ್ಲ ಆದರೆ ಹೊಸ ಸಿಎಂ ಬರ್ತಾರೆ ಎಂದು ಕಾಂಗ್ರೆಸ್ ಶಾಸಕ ಎಸ್.ರಾಮಪ್ಪ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹರಿಹರ ಕಾಂಗ್ರೆಸ್ ಶಾಸಕ ಎಸ್.ರಾಮಪ್ಪ ಅವರು, ಮೈತ್ರಿ ಸರ್ಕಾರ ಬೀಳುತ್ತದೆ ಎಂಬುದು ಊಹಾಪೋಹ ಆದರೆ ಹೊಸ ಮುಖ್ಯಮಂತ್ರಿ ಬರುತ್ತಾರೆ ಎನ್ನುವ ಮೂಲಕ ಹಲವು ರಾಜಕೀಯ ಸಾಧ್ಯತೆಗಳ ಬಗ್ಗೆ ಚಿಂತಿಸಲು ಅನುವು ಮಾಡಿಕೊಟ್ಟಿದ್ದಾರೆ.

ಎಸ್.ರಾಮಪ್ಪ ಅವರ ಮಾತನ್ನು ಗಮನಿಸಿದಲ್ಲಿ, ಮೈತ್ರಿ ಸರ್ಕಾರಕ್ಕೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗುತ್ತಾರೆಯೇ ಎಂಬ ಅನುಮಾನ ಮೂಡುತ್ತದೆ. ಸದ್ಯದ ರಾಜಕೀಯ ಬಿಕ್ಕಟ್ಟನ್ನು ಸೂಕ್ಷ್ಮವಾಗಿ ನೋಡಿದರೆ ಈ ಸಾಧ್ಯತೆ ಬಹಳಷ್ಟಿದೆ.

ಕಾಂಗ್ರೆಸ್‌ ಶಾಸಕ ಎಸ್.ರಾಮಪ್ಪ ಅವರು ಮಾಧ್ಯಮಗಳ ಮುಂದೆ ಹೇಳಿರುವ ಈ ವಿಷಯವು ರಾಜಕೀಯ ವಲಯದಲ್ಲಿ ಚರ್ಚೆಗೆ ಬಂದು ಈಗಾಗಲೇ ಕೆಲವು ದಿನಗಳು ಕಳೆದಿವೆ. ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರೇ ಬಹುತೇಕರು ರಾಜೀನಾಮೆ ನೀಡಿರುವ ಕಾರಣ ಸಿದ್ದರಾಮಯ್ಯ ಅವರು ಸಿಎಂ ಆಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

Leave a Comment