ಹೊಸ ವರ್ಷದಲ್ಲಿ ಬಿಜೆಪಿಗೆ ನೂತನ ಅಧ್ಯಕ್ಷರ ನೇಮಕ

ನವದೆಹಲಿ, ಆ. ೧೪- ಹೊಸ ವರ್ಷದ ಆರಂಭದಲ್ಲಿ ಬಿಜೆಪಿಗೆ ಹೊಸ ಅಧ್ಯಕ್ಷರ ಆಯ್ಕೆ ನಡೆಯಲಿದೆ.
ಮುಂಬರುವ ಜನವರಿ ಅಂತ್ಯದೊಳಗೆ ಹೊಸ ಅಧ್ಯಕ್ಷರ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಬಿಜೆಪಿ ಅಧ್ಯಕ್ಷ ಅಮಿಶ್ ಶಾ ರವರ ಸ್ಥಾನಕ್ಕೆ ಅರ್ಹರ ಹುಡುಕಾಟ ನಡೆದಿದೆ.
ಕೇಂದ್ರದ ಮಾಜಿ ಸಚಿವ ಹಾಗೂ ಬಿಜೆಪಿಯ ಹಿರಿಯ ಮುಖಂಡ ರಾಧಾಮೋಹನ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಿನ್ನೆ ಪಕ್ಷದ ಕೇಂದ್ರ ಕಛೇರಿಯಲ್ಲಿ ನಡೆದ ಸಾಂಸ್ಥಿಕ ಚುನಾವಣೆಗಳ ಬಿಜೆಪಿ ಚುನಾವಣಾ ಉಸ್ತುವಾರಿಗಳ ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ನೇಮಕಾತಿಯನ್ನು ಬರುವ ಜನವರಿ ಒಳಗೆ ಪೂರ್ಣಗೊಳಿಸುವ ಬಗ್ಗೆ ಚರ್ಚೆಗಳು ನಡೆಸಲಾಯಿತು.
ಮುಂದಿನ ವರ್ಷದ ಜನವರಿಯ ಆರಂಭದಲ್ಲಿ ಪಕ್ಷಕ್ಕೆ ನೂತನ ಅಧ್ಯಕ್ಷರ ನೇಮಕ ಮಾಡಲಾಗುತ್ತದೆ. ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಾಂಸ್ಥಿಕ ಚುನಾವಣೆಗಳು ಪೂರ್ಣಗೊಂಡ ನಂತರ ರಾಷ್ಟ್ರೀಯ ನೂತನ ಅಧ್ಯಕ್ಷರ ನೇಮಕಾತಿ ಪೂರ್ಣಗೊಳ್ಳಲು ಒಂದು ತಿಂಗಳ ಸಮಯ ಬೇಕಾಗುತ್ತದೆ ಎಂದು ಬಿಜೆಪಿ ಮೂಲಗಳು ಹೇಳಿವೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರುವ ಅಮಿತ್ ಶಾ ರವರ ಅವಧಿ ಈಗಾಗಲೇ ಮುಗಿದಿದ್ದು, ಅಮಿತ್ ಶಾ ರವರು ಕೇಂದ್ರ ಗೃಹ ಸಚಿವರಾಗಿಯೂ ಕಾರ್ಯನಿರ್ವಹಿಸುತ್ತಿದ್ದು ಅವರ ಸ್ಥಾನಕ್ಕೆ ಬಹು ಹಿಂದೆಯೇ ನೂತನ ಅಧ್ಯಕ್ಷರ ನೇಮಕ ವಾಗಬೇಕಿತ್ತು. ಲೋಕಸಭಾ ಚುನಾವಣೆ ಜತೆಗೆ ಈ ವರ್ಷಾಂತ್ಯಕ್ಕೆ ಬಾಕಿ ಇರುವ ಕೆಲ ರಾಜ್ಯಗಳ ವಿಧಾನಸಭಾ ಚುನಾವಣೆಗಳ ನಂತರ ನೂತನ ಅಧ್ಯಕ್ಷರ ನೇಮಕ ಮಾಡಲು ನಿರ್ಧಾರ ಕೈಗೊಳ್ಳಲಾಗಿತ್ತು. ಹಾಗಾಗಿ ಅಮಿತ್ ಶಾ ರವರು ಈ ವರ್ಷಾಂತ್ಯದವರೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ. ಬರುವ ವರ್ಷ ಆರಂಭದಲ್ಲಿ ಅಮಿತ್ ಶಾ ಅವರ ಸ್ಥಾನಕ್ಕೆ ನೂತನ ಅಧ್ಯಕ್ಷರ ನೇಮಕ ನಡೆಯಲಿದ್ದು, ಈಗ ಕಾರ್ಯಾಧ್ಯಕ್ಷರಾಗಿರುವ ಜೆ.ಪಿ. ನಡ್ಡಾ ರವರೇ ಮುಂದಿನ ಅಧ್ಯಕ್ಷರಾಗಿ ನೇಮಕವಾಗುವ ಸಾಧ್ಯತೆಗಳಿವೆ.

Leave a Comment