ಹೊಸ ತೊಡಕಿನ ಬಾಡೂಟದ ಭಾಗ್ಯ ಮೈಸೂರಿಗರಿಗಿಲ್ಲ

ಮೈಸೂರು, ಮಾ.26: ಕೊರೋನಾ ವೈರಸ್ ತಡೆಯಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಾಕಷ್ಟು ಕ್ರಮ ಕೈಗೊಳ್ಳುತ್ತಿವೆ. ಆದರೆ, ಜನರು ಮಾತ್ರ ತಮಗೂ ಇದಕ್ಕೂ ಸಂಬಂಧವೇ ಇಲ್ಲ ಎನ್ನುವ ರೀತಿ ನಡೆದುಕೊಳ್ಳುತ್ತಿರುವುದು ಬೇಸರದ ಸಂಗತಿ.
ಇಂದು ಯುಗಾದಿ ಹಬ್ಬದ ಹೊಸತಡುಕು. ಈ ಸಮಯದಲ್ಲಿ ನಾನ್ ವೆಜ್ ಅಡುಗೆ ಮಾಡೋದು ಸಂಪ್ರದಾಯ. ಹೀಗಾಗಿ, ಮಟನ್ ಶಾಪ್‍ಗಳಿಗೆ ಜನರು ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. ಹೊಸ ತೊಡಕಿನ ಬಾಡೂಟದ ಭಾಗ್ಯ ಮೈಸೂರಿಗರಿಗಿಲ್ಲವಾಗಿದೆ.
ಹೊಸ ತೊಡಕಿನ ಬಾಡೂಟಕ್ಕೆ ಕೊರೋನ, ಹಕ್ಕಿಜ್ವರ ಅಡ್ಡಿಯಾಗಿದ್ದು, ಹಕ್ಕಿಜ್ವರ ಮತ್ತು ಕೊರೋನ ಹಿನ್ನಲೆಯಲ್ಲಿ ಮೈಸೂರಿನಲ್ಲಿ ಮಾಂಸ ಮಾರಾಟಕ್ಕೆ ಜಿಲ್ಲಾಡಳಿತ ನಿಷೇಧ ಹೇರಿದೆ. ಈ ಹಿನ್ನೆಲೆ ಮೈಸೂರಿನ ಎಲ್ಲಾ ಮಾಂಸದ ಅಂಗಡಿಗಳು ಕ್ಲೋಸ್ ಆಗಿದ್ದು, ದೇವರಾಜ ಮಾರುಕಟ್ಟೆಯಲ್ಲಿನ ಮಾಂಸದ ಅಂಗಡಿಗಳು ಸೇರಿದಂತೆ ನಗರದ ಎಲ್ಲಾ ಮಾಂಸದಂಗಡಿಗಳು ಬಂದ್ ಆಗಿವೆ. ಮಟನ್ ಚಿಕನ್ ಪ್ರಿಯರ ಆಸೆಗೆ ಕೊರೋನಾ ತಣ್ಣೀರೆರಚಿದೆ.
ಕೆಲವು ಕಡೆ ಲಾಕ್ ಡೌನ್ ನಡುವೆಯೂ ಕದ್ದು ಮುಚ್ಚಿ ಮಾಂಸ ಮಾರಾಟ ಮಾಡಲಾಗುತ್ತಿದೆ. ಯುಗಾದಿಯ ಮರು ದಿನ ಹೊಸ ತೊಡಕಿನ ಹಿನ್ನಲೆಯಲ್ಲಿ ಮಾಂಸಕ್ಕಾಗಿ ಭಾರೀ ಡಿಮ್ಯಾಂಡ್ ಕಂಡು ಬಂದಿದ್ದು, ಟೆರೇಷಿಯನ್ ಕಾಲೇಜು ಬಳಿ ಮನೆಯೊಳಗೆ ಮಾಂಸ ಮಾರಾಟ ನಡೆಯುತ್ತಿದೆ. ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಳ್ಳದೆ ವ್ಯಾಪಾರ ನಡೆಯುತ್ತಿದ್ದು, ಮಾಂಸ ಖರೀದಿಗೆ ಮಾಂಸ ಪ್ರಿಯರು ಮುಗಿಬಿದ್ದಿದ್ದಾರೆ. ಸ್ಥಳಕ್ಕೆ ಆಲನಹಳ್ಳಿ ಪೊಲೀಸರು ಆಗಮಿಸಿದ್ದು, ಮಾಂಸ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದರು.
ಕೊರೋನಾ ವೈರಸ್ ಹರಡುವುದನ್ನು ತಡೆಯಲು ಕನಿಷ್ಠ ಮೂರು ಆಡಿ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಸರ್ಕಾರ ಸೂಚಿಸಿದೆ. ಆದರೆ, ಇದನ್ನು ಲೆಕ್ಕಿಸದ ಜನರು ನಾಮುಂದು-ತಾಮುಂದು ಎಂದು ಚಿಕನ್ ಮಟನ್ ಖರಿಸಿದ್ದಾರೆ. ಇನ್ನು, ಗ್ರಾಹಕರು ಅಂತರ ಕಾಯ್ದುಕೊಳ್ಳಲು ಮಟನ್ ಶಾಪ್ ಅಂಗಡಿಗಳು ಕೂಡ ಯಾವುದೆ ವ್ಯವಸ್ಥೆ ಮಾಡಿಲ್ಲ.
ಮೈಸೂರಿನ ಬಹತೇಕ ಕಡೆ ಎಲ್ಲಾ ಮಾಂಸದ ಅಂಗಡಿಗಳು ಸಂಪೂರ್ಣ ಕ್ಲೋಸ್ ಆಗಿದ್ದು, ಬೋಟಿ ಬಜಾರ್ ನಲ್ಲಿ ಎಲ್ಲಾ ಮಾಂಸದ ಅಂಗಡಿಗಳು ಬಂದ್ ಆಗಿವೆ. ದೇವರಾಜ ಮಾರುಕಟ್ಟೆಯ ಬಳಿ ಇರುವ ಬೋಟಿ ಬಜಾರ್ ನಲ್ಲಿ ಹತ್ತಾರು ಮಾಂಸದಂಗಡಿಗಳಿದ್ದು, ಮಾಂಸದಂಗಡಿ ತೆರೆಯದ ಹಿನ್ನಲೆ ಬಿಕೋ ಎನ್ನುತ್ತಿದೆ. ಮೀನು ಮಾರಾಟಕ್ಕೆ ಅವಕಾಶ ನೀಡಿದರೂ, ಮೀನು ಮಾರಾಟದ ಅಂಗಡಿಗಳು ಓಪನ್ ಆಗಿಲ್ಲ ಎನ್ನಲಾಗಿದೆ.
ಕೊರೋನಾ ವೈರಸ್ ಹರಡದಂತೆ ತಡೆಯಲು ಕೇಂದ್ರ ಸರ್ಕಾರ 21 ದಿನಗಳ ಲಾಕ್ ಡೌನ್ ಆದೇಶ ಹೊರಡಿಸಿತ್ತು. ಆದಾಗ್ಯೂ ಜನರು ರಸ್ತೆಯಮೇಲೆ ಹಾಯಾಗಿ ತಿರುಗಾಡುತ್ತಿದ್ದಾರೆ.

Leave a Comment