ಹೊಸಪೇಟೆ ಸಾರಿಗೆ ಸಂಸ್ಥೆ ಅಧಿಕಾರಿ ವಿರುದ್ಧ ಕೇಸ್ ದಾಖಲಿಸಲು ಆಗ್ರಹಿಸಿ ಪ್ರತಿಭಟನೆ

ಬಳ್ಳಾರಿ, ಆ.10: ಜಿಲ್ಲೆಯ ಹೊಸಪೇಟೆಯಲ್ಲಿ ಸಾರಿಗೆ ಸಂಸ್ಥೆಯ ವಿಭಾಗಾಧಿಕಾರಿ ವಿರುದ್ಧ ಪೊಲೀಸ್ ಮೊಕದ್ದಮೆಗೆ ಆಗ್ರಹಿಸಿ ಇಂದು ಸಿಐಟಿಯುನ ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿ ಮತ್ತು ಕಾರ್ಮಿಕ ಸಂಘದಿಂದ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನಾ ಧರಣಿ ನಡೆಸಲಾಯಿತು.

ಹೊಸಪೇಟೆ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಮಹಮ್ಮದ್ ಪೈಜ್ ಅವರು ಅಧಿಕಾರ ವಹಿಸಿಕೊಂಡ ದಿನದಿಂದಲೂ ಕಾರ್ಮಿಕರ ಮೇಲೆ ದೌರ್ಜನ್ಯ ನಡೆಸುತ್ತಿದ್ದು ಅವರು ಭ್ರಷ್ಠಾಚಾರಿಗಳಾಗಿದ್ದಾರೆ. ತನ್ನ ಚೇಲಾಗಳ ಗುಂಪು ಕಟ್ಟಿಕೊಂಡು ಪ್ರತಿಯೊಂದು ಪ್ರಕರಣದಲ್ಲಿ ಹಣ ವಸೂಲಿ ಮಾಡುತ್ತಾರೆ. ಅವರಿಗೆ ಕಪ್ಪ ಸಲ್ಲಿಸದ ನೌಕರರಿಗೆ ಬಡ್ತಿ ಕಡಿತ, ದಂಡ ವಿಧಿಸುವುದನ್ನು ಮಾಡುತ್ತಾರೆ. ಇತ್ತೀಚೆಗೆ ಇವರ ಕಿರುಕುಳಕ್ಕೆ ಬೇಸತ್ತು ‘ಡಿ’ ಗ್ರೂಪ್ ನೌಕರ ಸದಾಶಿವ ಈಡಿಗಾರ ಅವರು ಡೆತ್ ನೋಟ್ ಬರೆದು ವಿಷ ಸೇವನೆ ಮಾಡಿ ಆತ್ಮಹತ್ಯೆಗೆ ಮುಂದಾಗಿದ್ದಾರೆ. ಅವರ ಸ್ಥಿತಿ ಇನ್ನು ಚಿಂತಾಜನಕವಾಗಿದೆ. ಮಹಮ್ಮದ್ ಅವರ ನಡತೆ ಮತ್ತು ದೌರ್ಜನ್ಯವನ್ನು ನಮ್ಮ ಸಂಘಟನೆ ಖಂಡಿಸುತ್ತದೆ. ಮತ್ತು ಅವರ ಮೇಲೆ ಕ್ರಿಮಿನಲ್ ಕೇಸು ದಾಖಲಿಸಿ ಸಾಮಾಜಿಕ ನ್ಯಾಯ ಒದಗಿಸಬೇಕೆಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ.

ಸಂಘಟನೆಯ ಮುಖಂಡರುಗಳಾದ ಆದಿಮೂರ್ತಿ, ಚೆನ್ನಪ್ಪ, ಕಾಂತಯ್ಯ ಗುತ್ತರಗಿಮಠ, ಹನುಮಂತರೆಡ್ಡಿ ಕೆ.ನಾಗಭೂಷಣರಾವ್, ವೀರಭದ್ರಗೌಡ, ಶ್ರೀನಿವಾಸ, ಸುರೇಶ್, ಬಸವರಾಜ, ವಿರೂಪಾಕ್ಷ, ಆರ್.ಶೇಷಪ್ಪ, ವೈ.ರಾಜು, ಹನುಮಾನಾಯ್ಕ್, ರೆಹಮಾನ್ ನಾದಫ್, ಆರ್.ಜೋಷಿ, ಧರಣಿ, ಯೇಸು ಜೇಮ್, ಮೊದಲಾದವರು ಇಲ್ಲಿ ಪಾಲ್ಗೊಂಡಿದ್ದರು.

Leave a Comment