ಹೊನ್ನಾಳಿಯಲ್ಲಿ “ವಚನ ದಿನ” ಕಾರ್ಯಕ್ರಮ

ಹೊನ್ನಾಳಿ, sಸೆ. 12-:ಜ್ಞಾನಾರ್ಜನೆಗಾಗಿ ಗ್ರಂಥಗಳನ್ನು ಅಭ್ಯಾಸ ಮಾಡಬೇಕು ಎಂದು ಹೊನ್ನಾಳಿಯ ಎಂಎಸ್‍ಪಿಯು ಕಾಲೇಜು ಪ್ರಾಂಶುಪಾಲ ಯು.ಎನ್. ಸಂಗನಾಳಮಠ ಹೇಳಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕ ಮತ್ತು ಬೆಂಗಳೂರಿನ ಶ್ರೀ ಶಿವರಾತ್ರೀಶ್ವರ ಆಡಳಿತ ಕಾರ್ಯಾಲಯಗಳ ಸಂಯುಕ್ತಾಶ್ರಯದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪನ ದಿನ ಹಾಗೂ ಸಂಸ್ಥಾಪಕರಾದ ಸುತ್ತೂರು ಜಗದ್ಗುರು ಡಾ. ಶ್ರೀ ರಾಜೇಂದ್ರ ಸ್ವಾಮಿಗಳ ಜನ್ಮ ದಿನದ ಅಂಗವಾಗಿ ಪಟ್ಟಣದ ಎಂಎಸ್‍ಪಿಯು ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ “ವಚನ ದಿನ” ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶರಣರ ಸಾಹಿತ್ಯವನ್ನು ಅಭ್ಯಾಸ ಮಾಡುವುದರಿಂದ ಶರಣರ ನಡೆ-ನುಡಿಗಳು ಅರ್ಥವಾಗಿ ದಾರ್ಶನಿಕರು ನುಡಿದಂತೆ ನಡೆಯಲು ಸಹಾಯಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾಲೇಜುಗಳಲ್ಲಿ ಹಮ್ಮಿಕೊಳ್ಳುವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸುವುದನ್ನು ಕಲಿತುಕೊಳ್ಳಬೇಕು ಎಂದು ಹೇಳಿದರು.
“ವಚನ ಸಾಹಿತ್ಯದಲ್ಲಿ ಪ್ರತಿಪಾದಿತವಾಗಿರುವ ವಿಶ್ವ ಮೌಲ್ಯಗಳು” ಎಂಬ ವಿಷಯವಾಗಿ ಹೊನ್ನಾಳಿಯ ಎಂಎಸ್‍ಪಿಯು ಕಾಲೇಜಿನ ಉಪನ್ಯಾಸಕ ಅಣ್ಣಪ್ಪ ಉಪನ್ಯಾಸ ನೀಡಿ, ವಚನ ಸಾಹಿತ್ಯದಲ್ಲಿ ವಿಶ್ವ ಮೌಲ್ಯಗಳು ಅಡಗಿದ್ದು, ಅವುಗಳನ್ನು ಎಲ್ಲರಿಗೂ ತಲುಪುವಂತೆ ಮಾಡಬೇಕಿದೆ ಎಂದು ತಿಳಿಸಿದರು.
12ನೇ ಶತಮಾನದಲ್ಲಿ ಉದಯಿಸಿದ ವಚನ ಸಾಹಿತ್ಯ, ಶರಣ ಸಾಹಿತ್ಯ ಇಂದಿಗೂ ಪ್ರಸ್ತುತವಾಗಿದ್ದು, ಮುಂದಿನ ಪೀಳಿಗೆಗೆ ವರ್ಗಾಂತರ ಮಾಡಲು ನಾವು ಶ್ರಮವಹಿಸಬೇಕಿದೆ ಎಂದು ಹೇಳಿದರು.
ಸಾಹಿತಿ ಕೆ.ಪಿ. ದೇವೇಂದ್ರಯ್ಯ ಮಾತನಾಡಿ, ಶರಣರ ನುಡಿಗಟ್ಟುಗಳನ್ನು ಆಗಿಂದಾಗ್ಗೆ ನಮ್ಮ ವಿದ್ಯಾರ್ಥಿಗಳಿಗೆ ಬಿತ್ತರಿಸುವ ಕಾರ್ಯ ಆಗಬೇಕಿದೆ ಎಂದು ಹೇಳಿದರು.
ನಿವೃತ್ತ ಮುಖ್ಯ ಶಿಕ್ಷಕ ಡಿ. ಚಿಕ್ಕಪ್ಪ, ಧನಂಜಯಪ್ಪ, ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷೆ ಶಾರದ ಕಣಗೊಟಗಿ, ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಕುಂದೂರು ಜಿ. ಹನುಮಂತಪ್ಪ ಮಾತನಾಡಿದರು. ವಚನ ಗಾಯನ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ ವಿದ್ಯಾರ್ಥಿಗಳಿಗೆ ನಿವೃತ್ತ ಮುಖ್ಯ ಶಿಕ್ಷಕ ಎಂಪಿಎಂ ವಿಜಯಾನಂದಸ್ವಾಮಿ ಬಹುಮಾನ ವಿತರಿಸಿದರು.
ಭಾರತೀಯ ವಿದ್ಯಾ ಸಂಸ್ಥೆ ನಿರ್ದೇಶಕ ಎಚ್.ಎಂ. ಅರುಣ್‍ಕುಮಾರ್, ಶಿವಮೂರ್ತಿ, ಶಿಕ್ಷಕಿ ಶಹಜಾನ್, ಉಪನ್ಯಾಸಕರಾದ ಸುದರ್ಶನ್, ಮಹೇಶ್, ಕುಮಾರನಾಯ್ಕ ಇತರರು ಉಪಸ್ಥಿತರಿದ್ದರು.

Leave a Comment