ಹೈಫೈ ಕಳ್ಳರಿಂದ ಸರಣಿ ಕಳ್ಳತನ

ಹುಳಿಯಾರು, ಜೂ. ೧೩- ಆಫೀಸರ್ಸ್ ಗೆಟಪ್‌ನಲ್ಲಿ ಬಂದಿರುವ ಹೈಫೈ ಕಳ್ಳರ ತಂಡವೊಂದು 6 ಅಂಗಡಿಗಳಲ್ಲಿ ಸರಣಿ ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಪಟ್ಟಣದಲ್ಲಿ ಕಳೆದ ರಾತ್ರಿ ನಡೆದಿದೆ.

ಪಟ್ಟಣದಲ್ಲಿ ಮಧ್ಯರಾತ್ರಿ 12.30 ರಿಂದ 3 ಗಂಟೆ ಸಮಯದಲ್ಲಿ ಹೈಫೈ ಕಳ್ಳರು 6 ಅಂಗಡಿಗಳ ಷಟಱ್ಸ್ ಮೀಟಿ ಒಳನುಗ್ಗಿ ಅಂಗಡಿಯೊಳಗಿದ್ದ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿ ಸುಮಾರು 3 ಲಕ್ಷಕ್ಕೂ ಅಧಿಕ ನಗದನ್ನು ದೋಚಿಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿರುವ 3 ಅಂಗಡಿಗಳು, ಒಂದು ಬಾರ್, ದಿನಸಿ ಅಂಗಡಿ ಹಾಗೂ ಕಬ್ಬಿಣದ ಅಂಗಡಿ ಸೇರಿದಂತೆ 6 ಅಂಗಡಿಗಳಲ್ಲಿ ಒಂದೇ ರಾತ್ರಿ ಈ ಸರಣಿ ಕಳ್ಳತನ ನಡೆದಿದೆ.

ಇನ್‌‌ಶರ್ಟ್ ಮಾಡಿಕೊಂಡು, ಜಾಕೇಟ್ ಹಾಕಿಕೊಂಡು ಆಫೀಸರ್ಸ್ ರೀತಿಯಲ್ಲಿ ಬಂದಿರುವ ಕಳ್ಳರ ಕರಾಮತ್ತು ಈ ಅಂಗಡಿಗಳ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕೇವಲ ಕ್ಯಾಷ್ ಕೌಂಟರ್‌ಗಳನ್ನೆ ಗುರಿಯಾಗಿಸಿಕೊಂಡಿರುವ ಈ ಹೈಫೈ ಕಳ್ಳರು 6 ಅಂಗಡಿಗಳ ಗಲ್ಲಾ ಪೆಟ್ಟಿಗಯನ್ನು ಹೊಡೆದು ಅದರಲ್ಲಿದ್ದ 3 ಲಕ್ಷಕ್ಕೂ ಅಧಿಕ ನಗದನ್ನು ಕಳವು ಮಾಡಿದ್ದಾರೆ ಎನ್ನಲಾಗಿದೆ.

ಇಂದು ಬೆಳಿಗ್ಗೆ ಎಂದಿನಂತೆ ಅಂಗಡಿಗಳ ಮಾಲೀಕರು ಅಂಗಡಿಯ ಬೀಗ ತೆಗೆಯಲು ಹೋದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.

ಘಟನೆಯ ಸುದ್ದಿ ತಿಳಿದ ಕೂಡಲೇ ಹುಳಿಯಾರು ಪೊಲೀಸರು ಸ್ಥಳಕ್ಕೆ ಧಾವಿಸಿ ಅಂಗಡಿಗಳಲ್ಲಿದ್ದ ಸಿಸಿ ಟಿವಿ ಪುಟೇಜ್‌ಗಳನ್ನು ಪರಿಶೀಲಿಸಿದಾಗ ಹೈಫೈ ಕಳ್ಳರ ಕರಾಮತ್ತು ಬೆಳಕಿಗೆ ಬಂದಿದೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಹುಳಿಯಾರು ಪೊಲೀಸರು ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.

Leave a Comment