ಹೈನೋದ್ಯಮದಲ್ಲಿ ತೊಡಗಿಸಿಕೊಳ್ಳಲು ವಲಸೆ ಕಾರ್ಮಿಕರಿಗೆ ಕೆಎಂಎಫ್ ಮನವರಿಕೆ

 

ಕಲಬುರಗಿ,ಮೇ.23-ಕೊರೊನಾ ಲಾಕ್ ಡೌನ್ ದಿಂದ ವಾಪಾಸ್ಸು ಬಂದಿರುವ ಕಾರ್ಮಿಕರಿಗೆ ಹಾಲು ಉತ್ಪಾದನೆಯ ಹೈನೋದ್ಯಮದಲ್ಲಿ ತೊಡಗಿಸಿಕೊಳ್ಳುವಂತೆ ಮನವರಿಕೆ ಮಾಡಲು ಇಲ್ಲಿನ ಕಲಬುರಗಿ- ಬೀದರ್, ಯಾದಗಿರಿ ಸಹಕಾರ ಹಾಲು  ಉತ್ಪಾದಕರ ಸಂಘಗಳ ಒಕ್ಕೂಟ ( ಕೆಎಂಎಫ್) ಮುಂದಾಗಿದೆ.

ಉದ್ಯೋಗ ಅರಸಿ ದೂರದ ಪಟ್ಟಣಗಳಿಗೆ ತೆರಳಿ ವಾಪಸ್ಸು ಬಂದಿರುವ ಕಾರ್ಮಿಕರಿಗೆ ಅವರಿರುವ ಕ್ವಾರೆಂಟೈನ್ ಕೇಂದ್ರಗಳಿಗೆ ಹೋಗಿ ಹೈನೋದ್ಯಮದಲ್ಲಿ ತೊಡಗಿಸಿಕೊಳ್ಳುವಂತೆ ಹಾಗೂ ಒಕ್ಕೂಟ ನೀಡುವ ಅಗತ್ಯ ತರಬೇತಿಗೆ ಹಾಜರಾಗುವಂತೆ ಕೋರಲಾಗುತ್ತಿದೆ ಎಂದು ಒಕ್ಕೂಟದ ಅಧ್ಯಕ್ಷ ರಾಮಚಂದ್ರ ಕಲ್ಯಾಣರಾವ (ಆರ್ ಕೆ. ) ಪಾಟೀಲ್ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು.

ಪ್ರತಿಯೊಬ್ಬ ವಲಸಿಗರು ಸ್ಥಳೀಯವಾಗಿ ಇದ್ದು, ಹೈನೋದ್ಯಮದಲ್ಲಿ ತೊಡಗಿಸಿಕೊಂಡರೆ ಸ್ವಾವಲಂಬನೆ ಬದುಕು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಕೆಲಸ ಅರಸಿಕೊಂಡು ಬೇರೆ ಬೇರೆ ರಾಜ್ಯಗಳಿಗೆ ಹೋಗಿದ್ದ ಕಲಬುರಗಿ, ಬೀದರ್ ಮತ್ತು ಯಾದಗಿರಿ ಜಿಲ್ಲೆಯ 3 ಲಕ್ಷ ಜನ ವಲಸೆ ಕಾರ್ಮಿಕರು, ರೈತರು ಮರಳಿ ಬಂದಿದ್ದು, ಆಸಕ್ತ ರೈತರಿಗೆ ಹೈನುಗಾರಿಕೆ ಬಗ್ಗೆ ತರಬೇತಿ ನೀಡಿ ಹೈನುಗಾರಿಕೆ ಮಾಡಲು ಪ್ರೋತ್ಸಾಹಿಸಲಾಗುವುದು. ಇದರಿಂದ ರೈತರು ಹೊರ ರಾಜ್ಯಗಳಿಗೆ ವಲಸೆ ಹೋಗುವುದು ತಪ್ಪವುದರ ಜೊತೆಗೆ ಅವರಿಗೆ ಸಮಾಜಿಕ ಭದ್ರತೆಯು ದೊರೆಯುತ್ತದೆ. ಅದೇ ರೀತಿ ಹಾಲಿನ ಬಟವಾಡೆಯನ್ನು ರೈತರಿಗೆ 7 ದಿನಕ್ಕೊಮ್ಮೆ ನೀಡಲಾಗುವುದು. ಈ ತರಹದ ವ್ಯವಸ್ಥೆ ಬೇರೆ ಯಾವುದೇ ಕಸುಬಿನಲ್ಲಿ ಇಲ್ಲ. ಆದ್ದರಿಂದ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೋರಿದರು.

ಕೆ.ಎಂ.ಎಫ್. ವ್ಯಾಪ್ತಿಯಲ್ಲಿ ಬರುವ ಕಲಬುರಗಿ, ಬೀದರ್ ಮತ್ತು ಯಾದಗಿರಿ ಜಿಲ್ಲೆಗಳಿಂದ ನಿತ್ಯ 45,332 ಲೀಟರ್ ಹಾಲು ಶೇಖರಣೆಗೊಳ್ಳುತ್ತಿದ್ದು, ಪ್ರತಿನಿತ್ಯ 60100 ಲೀಟರ್ ಹಾಲು ಮಾರಾಟವಾಗುತ್ತದೆ. ಈಗಿರುವ ಪ್ಲಾಂಟ್ ಹಳೆಯದಾಗಿದ್ದು, ಹಾಲಿನ ಗುಣಮಟ್ಟ ಅಭಿವೃದ್ಧಿ ಪಡಿಸಲು ಅತ್ಯಾಧುನಿಕ ಹೊಸ ಯಂತ್ರೋಪಕರಣಗಳನ್ನು ಅಳವಡಿಸಲು ರಾಜ್ಯ ಸರ್ಕಾರ ಮತ್ತು ಕರ್ನಾಟಕ ಹಾಲು ಮಹಾ ಮಂಡಳಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.

@12bc = ತಳಿ ಅಭಿವೃದ್ಧಿ

ಒಕ್ಕೂಟದ ವ್ಯಾಪ್ತಿಯಲ್ಲಿ 468417 ಜಾನುವಾರುಗಳಿದ್ದು, ಮುಂದಿನ ದಿನಗಳಲ್ಲಿ ಒಕ್ಕೂಟದ ವತಿಯಿಂದ 1 ಲಕ್ಷ ಜಾನುವಾರುಗಳಿಗೆ ಕೃತಕ ಗರ್ಭಧಾರಣೆ ಮೂಲಕ ತಳಿ ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಕರ್ನಾಟಕ ಹಾಲು ಮಹಾ ಮಂಡಳಿಯು ರೈತರಿಂದ ನೇರವಾಗಿ ಮೆಕ್ಕೆಜೋಳ ಖರೀದಿಸಲು ಮುಂದಾಗಿದ್ದು, ಪ್ರತಿ ಕ್ವಿಂಟಾಲ್ ಮೆಕ್ಕೆಜೋಳಕ್ಕೆ 1760 ರೂಪಾಯಿ ನಿಗದಿ ಪಡಿಸಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ರಂಜಾನ್ ಹಬ್ಬದ ಪ್ರಯುಕ್ತ ಈಗಾಗಲೆ ಮೂರು ಜಿಲ್ಲೆಗಳಿಗೆ ಬೇಕಾಗುವ ಹಾಲಿನ ಬೇಡಿಕೆಯಂತೆ ಹಾಲು ಶೇಖರಿಸಲಾಗುತ್ತಿದ್ದು, ಬೇರೆ ರಾಜ್ಯಗಳಿಂದ ಬರುವ ಕಲಬೆರೆಕೆ ಹಾಲಿನಿಂದ ಕ್ಯಾನ್ಸರ್ ಕಾಯಿಲೆ ಬರುವ ಸಂಭವವಿರುತ್ತದೆ. ಆದ್ದರಿಂದ ಗ್ರಾಹಕರು ನಂದಿನಿ ಗುಣಮಟ್ಟದ ಹಾಲನ್ನು ಖರೀದಿಸಿ ರಾಜ್ಯದ ರೈತರ ಆರ್ಥಿಕ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

Leave a Comment