ಹೈಕಮಾಂಡ್ ಗೆ ಸಾವಿರ ಕೋಟಿ ರೂ ಕಾಂಗ್ರೆಸ್ ಸರ್ಕಾರದ ಅಧಃಪತನಕ್ಕೆ ಸಾಕ್ಷಿ-ಬಿಜೆಪಿ ಟೀಕೆ

ಬಳ್ಳಾರಿ, ಫೆ.17:ಕಾಂಗ್ರೆಸ್ ಪಕ್ಷದ ಹೈಕಮಾಂಡಿಗೆ ರಾಜ್ಯದ ಮುಖ್ಯಮಂತ್ರಿಗಳ ಪರವಾಗಿ 1 ಸಾವಿರ ಕೋಟಿ ರೂಪಾಯಿಗಳ ಹಣ (ಕಪ್ಪ) ಸಂದಾಯವಾಗಿರುವ ಬಗ್ಗೆ ವಿಧಾನಪರಿಷತ್ ಸದಸ್ಯರಾದ ಕೆ.ಗೋವಿಂದರಾಜ್ ಅವರ ಡೈರಿಯಲ್ಲಿ ಉಲ್ಲೇಖಿಸಲಾಗಿದೆ. ಪಕ್ಷದ ಹೈಕಮಾಂಡಿಗೆ ಈ ರೀತಿ ಕದ್ದು-ಮುಚ್ಚಿ ಹಣ ನೀಡಿರುವುದು ರಾಜ್ಯ ಸರ್ಕಾರದ ಅಧಃಪತನಕ್ಕೆ ಸಾಕ್ಷಿಯಾಗಿದೆ ಎಂದು ಬಿಜೆಪಿ ಹಿರಿಯ ಧುರೀಣ, ಮಾಜಿ ಶಾಸಕ ಎಂ.ಎಸ್.ಸೋಮಲಿಂಗಪ್ಪ ಟೀಕಿಸಿದ್ದಾರೆ.

ಬಳ್ಳಾರಿ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿಂದು ಪೂರ್ವಾಹ್ನ ಮಾಜಿ ಶಾಸಕ ಜಿ.ಸೋಮಶೇಖರರೆಡ್ಡಿ ಮತ್ತಿತರರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಮತ್ತು ಇತರೆ ಪ್ರಮುಖರು ಕಾಂಗ್ರೆಸ್ ಹೈಕಮಾಂಡ್ ಗೆ ಸಾವಿರ ಕೋಟಿ ರೂಗಳ ಹಣವನ್ನು ಸಂದಾಯ ಮಾಡಿರುವ ಬಗ್ಗೆ ಸಿಎಂ ಅವರಿಗೆ ಅತ್ಯಂತ ಆತ್ಮೀಯ, ಆಪ್ತರೂ ಆಗಿರುವ ಶಾಸಕ ಗೋವಿಂದರಾಜು ಅವರ ಡೈರಿಯಲ್ಲಿ ಉಲ್ಲೇಖವಿರುವುದು ನಿಜ. ತಮ್ಮ ಕುರ್ಚಿ ಉಳಿಸಿಕೊಳ್ಳಲು ಸ್ಥಾನ ಭದ್ರಪಡಿಸಿಕೊಳ್ಳಲು ಹೈಕಮಾಂಡ್ ಗೆ ಹಣ ನೀಡಿರುವುದು ಕಾಂಗ್ರೆಸ್ ಸರ್ಕಾರದ ಅಧಃ ಪತನಕ್ಕೆ ಸಾಕ್ಷಿಯಾಗಿದೆ. ರಾಜ್ಯ ಬಿಜೆಪಿ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಈ ಬಗ್ಗೆ ಮಾಡಿರುವ ಆರೋಪ ಸತ್ಯವಾಗಿದೆ ಎಂದರು.

ಅಂತೆಯೇ ಬೆಂಗಳೂರಿನಲ್ಲಿ ‘ಉಕ್ಕಿನ ಮೇಲ್ಸೇತುವೆ’ ನಿರ್ಮಾಣ ಯೋಜನೆಯಲ್ಲಿ ಮುಖ್ಯಮಂತ್ರಿಗಳಿಗೆ, ಅವರ ಆಪ್ತರಾದವರಿಗೆ 65 ಕೋಟಿ ರೂಗಳ ಕಮೀಷನ್ ಹಣ ನೀಡಲಾಗಿದೆ. ರಾಷ್ಟ್ರೀಯ ಹಸಿರು ಪೀಠ (ಎನ್.ಜಿ.ಟಿ) ಮತ್ತು ಹೈಕೋರ್ಟ್ ತಡೆಯಾಜ್ಞೆ ನೀಡಿದ್ದ ಉಕ್ಕಿನ ಸೇತುವೆಯ ನಿರ್ಮಾಣಕ್ಕೆ ಸರ್ಕಾರ ಅವಸರ ತೋರುತ್ತಿರುವುದೇಕೆ? ಸಾರ್ವಜನಿಕರ ವಿರೋಧವನ್ನು ಹಾಗೂ ಪರಿಸರಕ್ಕೆ ಆಗುವ ಭಾರೀ ಹಾನಿಯನ್ನು ಲೆಕ್ಕಿಸದೇ ಇದನ್ನು ನಿರ್ಮಿಸಲು ಸರ್ಕಾರ ಮುಂದಾಗಿರುವುದು, ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ದೂರಿದರು.

ಈಗಾಗಲೇ ವಿವಿಧ ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಸಚಿವರಾದ ರಮೇಶ್ ಜಾರಕಿಹೊಳಿ, ಶಾಸಕ ಎಂಬಿಟಿ ನಾಗರಾಜ್, ಕಾಂಗ್ರೆಸ್ ಪಕ್ಷದ ಮಹಿಳಾ ಧುರೀಣರಾದ ಲಕ್ಷ್ಮೀ ಹೆಬ್ಬಾಳಕರ್ ಮತ್ತಿತರೆ ಮುಖಂಡರುಗಳ ನಿವಾಸಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳ ದಾಳಿ ನಡೆದು ನೂರಾರು ಕೋಟಿ ರೂಗಳ ಅಕ್ರಮ ಸಂಪತ್ತು ಸೂಕ್ತ ದಾಖಲೆಗಳಿಲ್ಲದ ಲಕ್ಷಾಂತರ ರೂಗಳ ನಗದು ಹಣ, ಕೆ.ಜಿ.ಗಟ್ಟಲೇ ಚಿನ್ನಾಭರಣ ಮತ್ತಿತರೆ ಆಸ್ತಿ-ಪಾಸ್ತಿಗಳ ಪತ್ತೆ ಆಗಿದ್ದರೂ ಸಿಎಂ ಸಿದ್ದರಾಮಯ್ಯನವರು ಯಾವುದೇ ಕ್ರಮವನ್ನು ಕೈಗೊಳ್ಳದಿರುವುದು ನಿಜಕ್ಕೂ ಖಂಡನೀಯ ಎಂದು ಸೋಮಲಿಂಗಪ್ಪ ನುಡಿದರು.

ತಿರುಚಲಾದ ‘ಸಿಡಿ’
ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಅನಂತಕುಮಾರ್ ಅವರು ಬಿಜೆಪಿ ಕಾರ್ಯಾಲಯದಲ್ಲಿ ಮಾತನಾಡುತ್ತಾ, ‘ಸಿಡಿ’ಯನ್ನು ಬಿಡುಗಡೆ ಮಾಡಿರುವ ಕಾಂಗ್ರೆಸ್ ಧುರೀಣರು ಸಿಡಿಯನ್ನು ಯಥಾವತ್ತಾಗಿ ಪ್ರಸಾರ ಮಾಡದೇ, ಸಿಡಿಯನ್ನು ತಿರುಚಿರುವುದು ಎದ್ದು ಕಾಣುತ್ತಿದೆ. ಯಡಿಯೂರಪ್ಪ ಹಾಗೂ ಅನಂತಕುಮಾರ್ ಅವರು ಸಿಎಂ ಸಿದ್ದರಾಮಯ್ಯ ಅವರು ತಪ್ಪೊಪಿಗೆ ಮಾತನಾಡಿದ್ದಾರೆ ಎಂದು ಸಂದರ್ಭಿಕವಾಗಿ ಯಡಿಯೂರಪ್ಪನವರಿಗೆ ವಿವರಿಸುತ್ತಿರುವುದನ್ನು ತಮ್ಮಿಷ್ಟದಂತೆ ತಿರುಚಿ, ತುಣಕನ್ನು ಮಾತ್ರವೇ ಬಿತ್ತರಿಸಿರುವುದು ಕಾಂಗ್ರೆಸ್ ನ ಕೀಳು ಅಭಿರುಚಿಯನ್ನು ತೋರಿಸುತ್ತದೆ ಎಂದು ಟೀಕಿಸಿದರು.

ಕಡು ಭ್ರಷ್ಠ ಸರ್ಕಾರ
ರಾಜ್ಯದಲ್ಲಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಕಳೆದ 4 ವರ್ಷಗಳಲ್ಲಿ ಜನಪರ ಆಡಳಿತ ನೀಡುವಲ್ಲಿ ವಿಫಲವಾಗಿದೆ. ಬರಗಾಲ ನಿರ್ವಹಣೆಯಲ್ಲಿ ಕೂಡಾ ವಿಫಲಗೊಂಡಿದೆ, ಇಡೀ ದೇಶದಲ್ಲಿಯೇ ಅತಿ ಭ್ರಷ್ಠ ಸರ್ಕಾರ ಎಂದರೆ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ. ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದಂತೆ ಇಡೀ ರಾಷ್ಟ್ರದಲ್ಲಿಯೇ ಸಿದ್ದರಾಮಯ್ಯನವರ ಸರ್ಕಾರ ಭ್ರಷ್ಠಾಚಾರದಲ್ಲಿ ನಂಬರ್ ಒನ್ ಎಂಬುವ ಕುಖ್ಯಾತಿ ಪಡೆದಿದೆ. ಎಲ್ಲಾ ರಂಗಗಳಲ್ಲಿಯೂ ವಿಫಲವಾಗಿದ್ದು, ಭ್ರಷ್ಠ ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯದ ಜನತೆ ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಂ.ಎಸ್.ಸೋಮಲಿಂಗಪ್ಪ, ಜಿ.ಸೋಮಶೇಖರರೆಡ್ಡಿ ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಧುರೀಣರುಗಳಾದ ಕೆ.ಎ.ರಾಮಲಿಂಗಪ್ಪ, ಎ.ಎಂ.ಸಂಜಯ್, ಶಂಕರಪ್ಪ, ಕಾರ್ಪೊರೇಟರ್ ಮಲ್ಲನಗೌಡ, ರಾಜ್ಯ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ದಮ್ಮೂರು ಶೇಖರ್, ನಾಗರಾಜಗೌಡ ಮತ್ತು ಇತರರು ಉಪಸ್ಥಿತರಿದ್ದರು.

Leave a Comment