ಹೇಳಿದ್ದನ್ನು ಮಾಡದ ಡಿಕೆಶಿ ಬಾಯಲ್ಲಿ ಅದೇ ರಾಗ ಅದೇ ಹಾಡು ಶ್ರೀರಾಮುಲು

ಬಳ್ಳಾರಿ, ನ.1: ಈ ಹಿಂದೆ ಬಳ್ಳಾರಿ ಗ್ರಾಮಾಂತರ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿಯೇ ಕ್ಷೇತ್ರದ ಜನತೆಗೆ ನೀಡಿದ ಭರವಸೆಗಳನ್ನೇ ಈಡೇರಿಸದ ಸಚಿವ ಡಿ.ಕೆ.ಶಿವಕುಮಾರ್ ಅವರು ಇಂದು ಅದೇ ರಾಗ ಅದೇ ಹಾಡು ಹಾಡಿದ್ದಾರೆ. ಇದಕ್ಕೆ ಜನತೆ ಚುನಾವಣೆಯಲ್ಲಿ ಅವರ ಅಭ್ಯರ್ಥಿಗೆ ತಕ್ಕ ಉತ್ತರ ನೀಡಲಿದ್ದಾರೆಂದು ಬಿಜೆಪಿ ಮುಖಂಡ ಬಿ.ಶ್ರೀರಾಮುಲು ಹೇಳಿದ್ದಾರೆ.

ಸಂಜೆವಾಣಿಯೊಂದಿಗೆ ಮಾತನಾಡಿದ ಅವರು, ಬಳ್ಳಾರಿ ಗ್ರಾಮಾಂತರ ಕ್ಷೇತ್ರವನ್ನು ಗುಡಿಸಲು ರಹಿತವಾಗಿ ಮಾಡುತ್ತೇನೆ, ಎಲ್ಲಾ ನೀರಾವರಿ ಯೋಜನೆ ಪೂರ್ಣಗೊಳಿಸಲಿದೆ ಸೇರಿದಂತೆ ನೂರಾರು ಭರವಸೆಗಳನ್ನು ಕೊಟ್ಟಿದ್ದರು.

ಅದನ್ನು ನಂಬಿ ಜನ ಕಾಂಗ್ರೆಸ್ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದರು. ಆದರೆ ನಂತರ ಡಿ.ಕೆ.ಶಿವಕುಮಾರ್ ಇತ್ತ ತಿರುಗಿ ನೋಡಲಿಲ್ಲ. ಜಿಲ್ಲೆಯ ಉಸ್ತುವಾರಿ ಸಚಿವರಾದ ಮೇಲೆ ಒಂದು ದಿನ ಬಂದು ಹೋದವರು ಮತ್ತೆ ಬಂದಿದ್ದು ಅವರು ಚುನಾವಣೆಗೆ. ಇದನ್ನೆ ಜನತೆ ಅರ್ಥಮಾಡಿಕೊಳ್ಳಬೇಕು.

ಅವರಿಗೆ ಜಿಲ್ಲೆಯ ಅಭಿವೃದ್ಧಿ ಬೇಕಿಲ್ಲ. ಇಲ್ಲಿನ ಮರಳು ಮಾಫಿಯಾದ ಮೇಲೆ ಕಣ್ಣಿಟ್ಟಿದ್ದು ಅದಕ್ಕಾಗಿ ಕಳೆದ ನಾಲ್ಕು ತಿಂಗಳಿಂದ ಜನತೆಗೆ ಒಂದು ಚೀಲ ಮರಳು ಸಿಗದಂತೆ ಮಾಡಿದ್ದಾರೆ. ಇದರಿಂದ ಜನತೆ ಅನುಭವಿಸುತ್ತಿರುವ ಕಿರುಕುಳಕ್ಕೆ ಮತಗಳ ಮೂಲಕ ಉತ್ತರ ದೊರೆಯಲಿದೆಂದರು.

ನಗರದಲ್ಲಿ ಮತ್ತು ಜಿಲ್ಲೆಯಲ್ಲಿ ರಸ್ತೆಗಳ ಅಗಲೀಕರಣ ಅಭಿವೃದ್ದಿ ಇವರು ಮಾಡಿದ್ದಾರಾ, ಕೇಂದ್ರದ ಅಮೃತ ಯೋಜನೆಯಿಂದ ನಗರಗಳ ಅಭಿವೃದ್ಧಿ ನಡೆದಿದೆ. ತುಂಗಭದ್ರ ಹೂಳು ತೆಗೆಯುವ ಭರವಸೆ ಏನಾಯ್ತು ಎಂದ ಅವರು, ಬರೀ ಮಾತುಗಳಿಂದಲೇ ಮನೆ ಕಟ್ಟುತ್ತಾರೆ. ಸೋನಿಯಾಗಾಂಧಿ ಅವರು ಪ್ರಕಟಿಸಿದ್ದು 3300 ಕೋಟಿ ಯೋಜನೆಯೇ ಪೂರ್ಣ ಆಗಿಲ್ಲ. ಹೀಗಿರುವಾಗ ಇವರು ಇಂದು ನೀಡುವ ಭರವಸೆಗಳಿಗೆ ಜನತೆ ಸೊಪ್ಪು ಹಾಕಲ್ಲ ಎಂದರು.

ಸುದ್ದಿಗೋಷ್ಠಿ ಕರೆದು ದಾಖಲೆ ಬಿಡುಗಡೆ ಮಾಡುತ್ತೇನೆ ಬಾಂಬ್ ಹಾಕುತ್ತೇನೆ ಎಂದು ಮಾಧ್ಯಮಗಳಲ್ಲಿ ಬರುವಂತೆ ಮಾಡಿದ್ದ ಅವರು ಕನಿಷ್ಠ ನಾನು ಹಾಕಿದ ಅಭಿವೃದ್ಧಿ ಬಗೆಗಿನ ದಾಖಲೆಗಳನ್ನು ಬಿಡುಗಡೆ ಮಾಡದೆ ಠುಸ್ ಎಂದಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಸ್ಪರ್ಧೆ ಮಾಡದೆ ಹಣದ ಅಮಿಷದಿಂದ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಇವರದೇ ಮೈತ್ರಿ ಪಕ್ಷ ಮಾಡಿರುವುದೇ ಇವರು ಎಂತಹ ಶಕ್ತಿ ಹೊಂದಿದ್ದಾರೆಂಬುದು ಅರ್ಥವಾಗುತ್ತೆಂದಿದ್ದಾರೆ.

Leave a Comment