ಹೇಮಾವತಿ ತುಮಕೂರು ನಾಲಾ ಸಾಮರ್ಥ್ಯ ಹೆಚ್ಚಳಕ್ಕೆ ಒತ್ತಾಯ

ತುಮಕೂರು, ಜೂ. 13- ಹೇಮಾವತಿ ಜಲಾಶಯದಿಂದ ಜಿಲ್ಲೆಗೆ ನೀರು ಹರಿಸುವ ನಾಲಾ ಸಾಮರ್ಥ್ಯವನ್ನು 1445 ಕ್ಯೂಸೆಕ್ಸ್‌ನಿಂದ 2500 ಅಥವಾ 4 ಸಾವಿರ ಕ್ಯೂಸೆಕ್ಸ್‌ಗೆ ಹೆಚ್ಚಿಸಬೇಕು ಎಂದು ಸಂಸದ ಜಿ.ಎಸ್. ಬಸವರಾಜು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಈ ಬಾರಿಯ ಬಜೆಟ್‌ನಲ್ಲಿ ಮೀಸಲಿಟ್ಟಿರುವ 200 ಕೋಟಿ ಅನುದಾನವನ್ನು ಕಾಲುವೆಯ ದುರಸ್ಥಿಗೆ ಬಳಸಲು ಡಿಪಿಆರ್ ಸಿದ್ದಪಡಿಸುವುದನ್ನು ಕೂಡಲೇ ಸ್ಥಗಿತಗೊಳಿಸಿ ತುಮಕೂರು ಶಾಖಾ ನಾಲೆಯನ್ನು ರೀಮಾಡೆಲಿಂಗ್ ಮತ್ತು ಹೆಚ್ಚುವರಿ ಸಾಮರ್ಥ್ಯಕ್ಕೆ ವಿಸ್ತರಿಸುವ ಯೋಜನೆ ರೂಪಿಸಬೇಕು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ಪ್ರವಾಹ ಸಂದರ್ಭದಲ್ಲಿ ನೀರನ್ನು ಸಂಗ್ರಹಿಸಲು ಮತ್ತು ಈಗಾಗಲೇ ಮಾಗಡಿಗೂ ಇದೇ ಕಾಲುವೆಯ ಮೂಲಕ ನೀರು ಕೊಂಡೊಯ್ಯಲು ಯೋಜನೆ ರೂಪಿಸಿರುವುದರಿಂದ ಈಗಿರುವ ಸಾಮರ್ಥ್ಯ ಹೆಚ್ಚಿಸಲೇಬೇಕು ಎಂದರು.

ಹೇಮಾವತಿ ಯೋಜನೆಯ ತುಮಕೂರು ಶಾಖಾ ನಾಲಾ ಸರಪಳಿ 0. ಕಿ.ಮೀ.ನಿಂದ 70 ಕಿ.ಮೀ. ವರೆಗೆ ವೈ-ನಾಲೆಯ ಸರಪಳಿ 15.727 ಕಿ.ಮೀ.ನಿಂದ ಹೇಮಾವತಿ ಯೋಜನೆಯ ತುಮಕೂರು ಶಾಖಾ ನಾಲಾ ಸರಪಳಿ 70 ಕಿ.ಮೀ. ನಿಂದ 165 ಕಿ.ಮೀ.ವರೆಗೆ ಸಂಪರ್ಕ ಕಲ್ಪಿಸುವ ಎಕ್ಸ್‌ಪ್ರೆಸ್/ಲಿಂಕಿಂಗ್ ಪೈಪ್‌ಲೈನ್ ಕಾಮಗಾರಿಗೆ 614 ಕೋಟಿ ಸೇರಿದಂತೆ 1089 ಕೋಟಿ ಖರ್ಚು ಮಾಡಿ ನೇರವಾಗಿ ಮಾಗಡಿ ತಾಲ್ಲೂಕಿಗೆ ನೀರು ಕೊಂಡೊಯ್ಯುವ ಯೋಜನೆಯನ್ನು ಕೂಡಲೇ ರದ್ದುಪಡಿಸಬೇಕು. ಇಲ್ಲದಿದ್ದರೆ ಬೀದಿಗಿಳಿದು ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ತುಮಕೂರು ನಾಲಾ ಕಾಲುವೆಯಲ್ಲಿ ಗಿಡ, ಮರ ಬೆಳೆದಿರುವುದು, ಮಣ್ಣು ತುಂಬಿರುವುದನ್ನು ಸ್ವಚ್ಚ ಮಾಡಿ ಸರಾಗವಾಗಿ ನೀರು ಹರಿಯಲು 16 ಕೋಟಿ ರೂ. ವೆಚ್ಚದ ಕಾಮಗಾರಿ ಮಾಡಲು ಕಾವೇರಿ ನೀರಾವರಿ ನಿಗಮ ಮುಂದಾಗಿದ್ದು, ಯಾವ ಕಿ.ಮೀ.ನ‌ಲ್ಲಿ ಎಷ್ಟು ರೂ.ಗಳ ಕಾಮಗಾರಿ ಮಾಡಲಾಗಿದೆ ಎಂಬ ಬಗ್ಗೆ ನಾಮಫಲಕ ಹಾಕಬೇಕು. ಮಣ್ಣು ಕೆರೆದು ಬಿಲ್ ಮಾಡುವ ಸಂಸ್ಕೃತಿಗೆ ಇತಿಶ್ರೀ ಹಾಡಬೇಕು ಎಂದರು.

ಈ ಸಂಬಂಧ ಜೂ. 29 ರಂದು ಹೇಮಾವತಿ ಮುಖ್ಯ ಇಂಜಿನಿಯರ್‌ರವರಿಗೆ ಪತ್ರ ಬರೆದು 16 ಕೋಟಿ ರೂ. ಖರ್ಚಿನ ಬಗ್ಗೆ ಮಾಹಿತಿ ಕೇಳಲಾಗುವುದು ಎಂದು ಅವರು ಹೇಳಿದರು.

ಈ ಭಾಗದ ಜನಪ್ರತಿನಿಧಿಗಳು ಮತ್ತು ತಜ್ಞರ ಸಭೆ ಕರೆದು ನಾಲಾ ಸಾಮರ್ಥ್ಯದ ಬಗ್ಗೆ ನಿರ್ಣಯ ಕೈಗೊಳ್ಳಬೇಕು. ಹೇಮಾವತಿ ಪ್ರವಾಹ ಸಂದರ್ಭದಲ್ಲಿ ಹೇಮಾವತಿ ಹಿನ್ನೀರಿನ ತುಮಕೂರು ನಾಲಾ ವರೆಗೂ ಇನ್ನೊಂದು ಪ್ರವಾಹ ಕಾಲುವೆ ನಿರ್ಮಿಸಿ ತುಮಕೂರು ನಾಲೆಗೆ ಲಿಂಕ್ ಮಾಡಬೇಕೋ ಅಥವಾ ಹೇಮಾವತಿ ಫ್ಲಡ್ ಪ್ಲೋ ಕೆನಾಲ್ ಪ್ರತ್ಯೇಕವಾಗಿ ನಿರ್ಮಿಸಬೇಕೋ ಎಂಬ ವಿಷಯ ಈಗಲೇ ನಿರ್ಣಯವಾಗಲಿ. ಇದು ಪದೇ ಪದೇ ಮಾಡುವ ಕೆಲಸವಾಗಬಾರದು ಎಂದರು.

ಹೇಮಾವತಿ ಜಲಾಶಯದಿಂದ ನಮ್ಮ ಜಿಲ್ಲೆಯ ಪಾಲಿನ 24 ಟಿಎಂಸಿ ನೀರನ್ನು ಹರಿಸಿ, ನಂತರ ಬೇರೆ ಎಲ್ಲಿಗಾದರೂ, ಎಷ್ಟು ಟಿಎಂಸಿ ನೀರನ್ನಾದರೂ ತೆಗೆದುಕೊಂಡು ಹೋಗಲಿ. ಮೊದಲು ನಮ್ಮ ಪಾಲಿನ ನೀರನ್ನು ನಮಗೆ ಹರಿಸಲಿ ಎಂದು ಅವರು ಒತ್ತಾಯಿಸಿದರು.

ಜಿಲ್ಲೆಯ ಮಧುಗಿರಿ, ಕೊರಟಗೆರೆ, ಪಾವಗಡ ತಾಲ್ಲೂಕುಗಳು ನದಿ ನೀರಿನಿಂದ ವಂಚಿತವಾಗಿವೆ. ಈ ಭಾಗದ ಜನತೆಯ ಅಳಿವು ಉಳಿವಿನ ಪ್ರಶ್ನೆಯಾಗಿದೆ. ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ ಒದಗಿಸುವುದೇ ನನ್ನ ಮೊದಲ ಆದ್ಯತೆ ಎಂದ ಅವರು, ಹೇಮಾವತಿ ನೀರು ಬರುವ ತಿಪಟೂರು, ತುರುವೇಕೆರೆ, ಚಿಕ್ಕನಾಯಕನಹಳ್ಳಿ, ಗುಬ್ಬಿ, ತುಮಕೂರು, ಕುಣಿಗಲ್ ಹಾಗೂ ಸಿರಾ ತಾಲ್ಲೂಕಿನ ಉಳಿದ ಭಾಗಗಳಿಗೂ ನದಿ ನೀರು ನೀಡಲೇಬೇಕಿದೆ. ಜಿಲ್ಲೆಯ ಎಲ್ಲಾ ಕೆರೆಗಳಿಗೆ ನದಿ ನೀರಿನ ಯೋಜನೆ ಜಾರಿಯಾಗಲೇಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕುಂದರನಹಳ್ಳಿ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

Leave a Comment