ಹೆಸರು ನೊಂದಣಿಗೆ ಪಟ್ಟು

(ವಿಜಯ ಕುಮಾರ್)

ಧಾರವಾಡ, ಜ. ೪- ಹೊಸದಾಗಿ ಹೆಸರು ನೊಂದಣಿ ಮಾಡಬೇಕೆಂದು ಪಟ್ಟುಹಿಡಿದು ಕೆಲ ಜಿಲ್ಲೆಗಳ ಪ್ರತಿನಿಧಿಗಳು ಸಮ್ಮೇಳನ ಸಭಾಂಗಣದ ಸಮೀಪ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.

ರಾಯಚೂರು, ಮೈಸೂರು, ಹಾಸನ, ಶಿವಮೊಗ್ಗ, ಮತ್ತಿತರ ಜಿಲ್ಲೆಗಳಿಂದ ಆಗಮಿಸಿರುವ ಪ್ರತಿನಿಧಿಗಳು ತಮಗೆ ಸಮ್ಮೇಳನದಲ್ಲಿ ಭಾಗವಹಿಸಲು ನೊಂದಣಿ ಮಾಡಿಕೊಂಡಿಲ್ಲ. ತಕ್ಷಣವೇ ಕೌಂಟರ್ ಅನ್ನು ತೆರೆದು ಹೊಸದಾಗಿ ನೊಂದಣಿ ಮಾಡಿಕೊಡುವಂತೆ ಆಗ್ರಹಪಡಿಸಿದರು.

ಸುಮಾರು 100ಕ್ಕೂ ಹೆಚ್ಚು ಮಂದಿ ಪ್ರತಿನಿಧಿಗಳು ಪ್ರತಿಭಟನೆ ನಡೆಸಿ, ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಮನು ಬಳಿಗಾರ್ ಅವರು ಸ್ಥಳಕ್ಕೆ ಆಗಮಿಸಿ, ನೊಂದಣಿ ಮಾಡಿಕೊಡುವಂತೆ ಸಿಬ್ಬಂದಿಗಳಿಗೆ ಸೂಚಿಸಬೇಕೆಂದು ಒತ್ತಾಯಿಸಿದರು.

ಸಮ್ಮೇಳನಕ್ಕೆ ಕನ್ನಡ ಅಭಿಮಾನದಿಂದಲೇ ಬಂದಿದ್ದೇವೆ, ಆದರೆ ತಮ್ಮ ಹೆಸರುಗಳನ್ನು ನೊಂದಣಿ ಮಾಡಿಕೊಳ್ಳದಿದ್ದರೆ, ಸಮ್ಮೇಳನದಲ್ಲಿ ಭಾಗವಹಿಸುವುದಾದರೂ ಹೇಗೆ? ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.

ಕೆಲ ತಾಲ್ಲೂಕುಗಳಲ್ಲಿ ನೊಂದಣಿ ಮಾಡಿಕೊಳ್ಳಬೇಕೆಂದು ಆದೇಶವಿದ್ದರೂ ಕೊನೆಗಳಿಗೆಯವರೆಗೆ ಕೌಂಟರ್‌ಗಳನ್ನು ತೆರೆಯಲೇಇಲ್ಲ. ಸಮ್ಮೇಳನದ ಸ್ಥಳದಲ್ಲಿರುವ ಕೌಂಟರ್‌ನಲ್ಲಿಯೇ ಹೆಸರು ನೊಂದಾಯಿಸಿಕೊಳ್ಳಲಾಗುವುದು ಎಂದು ಸಂಘಟಕರು ಹೇಳುವ ಮೂಲಕ ಅಸಹಾಯಕತೆ ಪ್ರದರ್ಶಿಸಿದ್ದಾರೆ ಎಂದು ಟೀಕಿಸಿದರು.

ಹೆಸರು ನೊಂದಣಿಯಾಗುವವರೆಗೂ ವಸತಿ, ಊಟದ ವ್ಯವಸ್ಥೆ ಸಿಗುವುದಿಲ್ಲ. ಅಲ್ಲದೆ, ಒಒಡಿ ಪತ್ರ ಕೂಡ ನಮ್ಮ ಕೈಸೇರುವುದಿಲ್ಲ. ಕೆಲ ತಾಲ್ಲೂಕುಗಳಲ್ಲಿ 100 ರಷ್ಟು ಮಾತ್ರವೇ ಹೆಸರು ನೊಂದಣಿ ಮಾಡಿಸಿಕೊಳ್ಳಲಾಗಿದೆ. ಬಹುತೇಕರು ಒಂದೇ ಕುಟುಂಬದ 5 – 6 ಮಂದಿ ಹೆಸರನ್ನು ನೊಂದಾಯಿಸಲು ಅವಕಾಶ ನೀಡಲಾಗಿದೆ ಎಂದು ಆಪಾದಿಸಿದರು.

Leave a Comment