ಹೆಳವರ ಹುಂಡಿಯಲ್ಲಿ ಪೌರ ಕಾರ್ಮಿಕರ ದಿನಾಚರಣೆ

ತಿ.ನರಸೀಪುರ : ಅ.9- ಪಟ್ಟಣ ಸಮೀಪದ ಹೆಳವರ ಹುಂಡಿ ಗ್ರಾಮದ ಬಸವ ಮಹಾಮನೆಯಲ್ಲಿ ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಮಹಿಳಾ ಪೌರ ಕಾರ್ಮಿಕರನ್ನು ಅಭಿನಂದಿಸಲಾಯಿತು.
ಮಂಗಳವಾರ ನಡೆದ  ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಾಣಿಜ್ಯ ಇಲಾಖೆಯ ನಿವೃತ್ತ ಅಧಿಕಾರಿ  ಹೆಳವರಹುಂಡಿ  ಡಾ. ಸಿದ್ದಪ್ಪ,  ಪೌರಕಾರ್ಮಿಕರೇ ಸ್ವಚ್ಚ ಭಾರತ ಪರಿಕಲ್ಪನೆಗೆ ಭದ್ರ ಬುನಾದಿ. ಇವರನ್ನು ಸನ್ಮಾನಿಸುವುದು ನಮಗೆ ಸಂತಸ ತಂದಿದೆ.  ಪೌರ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಗಂಭೀರ ಚಿಂತನೆ ಮಾಡಿ ಅದನ್ನು ಬಗೆಹರಿಸುವತ್ತ ಸರ್ಕಾರಗಳು ಚಿಂತನೆ ಮಾಡಬೇಕಿದೆ. ಈ ಹಿಂದೆ  ಬಸವಲಿಂಗಯ್ಯ ಮಲ ಹೊರುವ ಅನಿಷ್ಟ ಪದ್ಧತಿಯ ವಿರುದ್ಧ ದನಿ ಎತ್ತಿದರು. ಹೆಸರಿಗೆ ಮಾತ್ರ ನಾವು ಒಗ್ಗಟ್ಟಿನ ಮಂತ್ರ ಪಠಿಸುತ್ತೇವೆ ಆದರೆ  ಕಾರ್ಯರೂಪಕ್ಕೆ ತರುವಲ್ಲಿ ವಿಫಲವಾಗುತ್ತಿರುವುದು ವಿಷಾದನೀಯ ಎಂದರು.
ವಾಟಾಳು ಮಠಾಧೀಶ ಡಾ. ಸಿದ್ಧ ಲಿಂಗಶಿವಾಚಾರ್ಯ ಸ್ವಾಮೀಜಿ,  ಮನೆ-ಮನಸ್ಸುಗಳನ್ನ  ಮಾತ್ರ ಸ್ವಚ್ಚಗೊಳಿಸುವ ನಾವು ಊರಿನ ಶುಚಿತ್ವಕ್ಕಾಗಿ ಪೌರ ಕಾರ್ಮಿಕರನ್ನು ಅವಲಂಬಿಸಿದ್ದೇವೆ  ಅವರ ಸೇವೆ ನಿಜಕ್ಕೂ ಅಭಿನಂದನೀಯ.  ಅವರನ್ನು ಸನ್ಮಾನಿಸುತ್ತಿರುವ ಈ ವೇದಿಕೆ ಕಾರ್ಯಕ್ರಮ ಅರ್ಥಪೂರ್ಣ ಎಂದು ಹೇಳಿದರು.
ಈ ವೇಳೆ ಪೌರಕಾರ್ಮಿಕರಾದ  ಮಾಗಾಳಿಯಮ್ಮ,  ಬಣ್ಣಮ್ಮ, ರಂಗಮ್ಮ, ಸರೋಜಮ್ಮ, ಸಾವಿತ್ರಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿ.ಪಂ ಮಾಜಿ  ಸದಸ್ಯ ಹೊನ್ನ ನಾಯಕ, ತಾಲ್ಲೂಕು ಪಂಚಾಯಿತಿ ಸದಸ್ಯ ರಮೇಶ್, ಪುರಸಭಾ ಸದಸ್ಯ ಹೆಳವರಹುಂಡಿ ಸೋಮು, ಸಮಾಜ ಸೇವಕ ಮಾದೇಶ್,  ಕರೋಹಟ್ಟಿ ಪ್ರಭುಸ್ವಾಮಿ, ಕರೋಹಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ್, ಕನ್ನಡ ಪುಟ್ಟಸ್ವಾಮಿ, ನೌಕರರ ಸಂಘದ ಅಧ್ಯಕ್ಷ ಶಿವಶಂಕರ ಮೂರ್ತಿ, ಆಲಗೂಡು ಡಾ. ಚಂದ್ರಶೇಖರ್, ಪಿ.ಎಲ್.ಡಿ.ಬ್ಯಾಂಕ್ ನಿರ್ದೇಶಕ ಲಿಂಗಪ್ಪಾಜಿ, ಸೋಸಲೆ ರಾಜಶೇಖರ್, ಧರ್ಮಯ್ಯನಹುಂಡಿ ಪ್ರಭು, ಹಾಲುಮತ ಮಹಾಸಭಾದ ಮಂಜು , ಪ್ರಮೋದ್, ವಕೀಲರ ಸಂಘದ ಮಾಜಿ ಅಧ್ಯಕ್ಷ ರವಿಶಂಕರ್,  ನಾಗೇಂದ್ರ ಪ್ರಸಾದ್, ಜ್ಞಾನೇಂದ್ರ ಮೂರ್ತಿ, ರವಿ ವಿರೂಪಾಕ್ಷ,  ಮಹದೇವಸ್ವಾಮಿ , ಅಡಿಗೆ ಮಹೇಶ ಮೊದಲಾದವರಿದ್ದರು.

Leave a Comment