ಹೆಲಿಕಾಪ್ಟರ್ ಗಳ ಮೂಲಕ ಮೋದಿ ಹಣ ಸಾಗಣೆ

ಅಮರಾವತಿ.ಏ.15. ಬಿಜೆಪಿ ನಾಯಕರಿಗೆ ಹಂಚಲು ಹೆಲಿಕಾಪ್ಟರ್ ಗಳ ಮೂಲಕ ಪ್ರಧಾನಿ ಮೋದಿ ಹಣ ಸಾಗಣೆ ಮಾಡುತ್ತಿದ್ದಾರೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್‍.ಚಂದ್ರಬಾಬು ನಾಯ್ಡು ಗಂಭೀರ ಆರೋಪ ಮಾಡಿದ್ದಾರೆ.

ಇಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ ಬಿಜೆಪಿ ನಾಯಕರಿಗೆ ಹಂಚಲು ಪ್ರಧಾನಿ ಮೋದಿ ಭದ್ರತೆಯ ಅವಕಾಶ ಪಡೆದು ಹೆಲಿಕಾಪ್ಟರ್ ಗಳ ಮೂಲಕ ಹಣ ಸಾಗಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಪ್ರಧಾನಮಂತ್ರಿಗೆ ನೀತಿ ಸಂಹಿತೆ ಅನ್ವಯಿಸುವುದಿಲ್ಲವೇ ಎಂದು ಪ್ರಶ್ನಿಸಿದ ಅವರು, ಅಪರಾಧಿಗಳಿಗೆ ಮೋದಿ ಚೌಕಿದಾರ್ ಆಗಿದ್ದು, ದೇಶವನ್ನು ನಾಶ ಮಾಡಿದ್ದಾರೆ ಎಂದು ನಾಯ್ಡು ಆರೋಪಿಸಿದ್ದಾರೆ.

ಶೇ.50ರಷ್ಟು ವಿವಿಪ್ಯಾಟ್‍ ಚೀಟಿಗಳನ್ನು ಎಣಿಕೆ ಮಾಡಲು ಚುನಾವಣಾ ಆಯೋಗ ಏಕೆ ಒಪ್ಪುತ್ತಿಲ್ಲ ಎಂದು ಗೊತ್ತಾಗುತ್ತಿಲ್ಲ. ಈ ಕುರಿತಾಗಿ ಸುಪ್ರೀಂಕೋರ್ಟ್ ಗೆ ಮತ್ತೊಮ್ಮೆ ಮನವಿ ಸಲ್ಲಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಚುನಾವಣಾ ಆಯೋಗದ ತಪ್ಪುಗಳನ್ನು ಎತ್ತಿತೋರಿದಾಗ, ತಾವು ಈ ವಿಷಯವನ್ನು ರಾಜಕೀಯಗೊಳಿಸುತ್ತಿದ್ದೇವೆ ಎಂದು ತಮ್ಮನ್ನು ದೂರುತ್ತಾರೆ.

ಪ್ರಜಾಪ್ರಭುತ್ವವಿರುವ 190 ದೇಶಗಳ ಪೈಕಿ ಕೇವಲ 18 ದೇಶಗಳು ಇವಿಎಂಗಳನ್ನು ಬಳಕೆ ಮಾಡುತ್ತಿವೆ ಎಂದು ನಾಯ್ಡು ಹೇಳಿದ್ದಾರೆ.

ಇತ್ತೀಚೆಗೆ ಮುಗಿದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಟಿಡಿಪಿ ಕನಿಷ್ಟ 150 ಸ್ಥಾನಗಳನ್ನು ಗೆಲ್ಲಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Leave a Comment