ಹೆಬ್ರಿ ಆಶಾ ಕಾರ್ಯಕರ್ತೆ ಕುರಿತು ವಾಟ್ಸಾಪ್‌ನಲ್ಲಿ ಅವಹೇಳನಕಾರಿ ಪೋಸ್ಟ್: ಪೊಲೀಸ್ ದೂರು

ಉಡುಪಿ, ಏ.೩- ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ವರಂಗ ಎಂಬಲ್ಲಿ ಆಶಾ ಕಾರ್ಯಕರ್ತೆ ಮತ್ತವರ ಕುಟುಂಬದ ಬಗ್ಗೆ ವಾಟ್ಸ್ ಆಪ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿ ಮಾನಹಾನಿ ಮಾಡಿರುವ ಕುರಿತು ಹೆಬ್ರಿ ಠಾಣೆಗೆ ದೂರು ನೀಡಲಾಗಿದೆ. ಸ್ಥಳೀಯ ಯುವಕನೋರ್ವ ಪೂರ್ವದ್ವೇಷದ ಹಿನ್ನೆಲೆಯಲ್ಲಿ ಕೃತ್ಯವೆಸಗಿದ್ದಾನೆ ಎನ್ನಲಾಗಿದ್ದು ಪೊಲೀಸರು ಆತನ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ. ವರಂಗ ನಿವಾಸಿ ರಾಹುಲ್ ಜೈನ್(೨೬) ಪ್ರಕರಣದ ಆರೋಪಿ.
ಪ್ರಕರಣದ ಹಿನ್ನೆಲೆ:
ವರಂಗ ಭಾಗದಲ್ಲಿ ಆಶಾ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿರುವ ಶೋಭಾ ಭಂಡಾರಿ ಕುರಿತು ಕೆಳದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಯನ್ನು ಹರಿಯಬಿಡಲಾಗುತ್ತಿತ್ತು. ಶೋಭಾ ಭಂಡಾರಿ ಅವರ ಪತಿ ಮುನಿಯಾಲಿನಲ್ಲಿ ಸೆಲೂನ್ ಹೊಂದಿದ್ದು ಕೊರೊನಾ ವೈರಸ್ ಹರಡುವುದನ್ನು ತಪ್ಪಿಸಲು ದೇಶವ್ಯಾಪಿ ಬಂದ್ ಇರುವುದರಿಂದ ಅದನ್ನು ವಾರದ ಹಿಂದೆಯೇ ಬಂದ್ ಮಾಡಿದ್ದರು. ಆದರೆ ಇಂದು ಮತ್ತೆ ಆರೋಪಿಯು ಆಶಾ ಕಾರ್ಯಕರ್ತೆ ಮತ್ತವರ ಪತಿ ಮನೆಯಲ್ಲೇ ಸೆಲೂನ್ ನಡೆಸುತ್ತಿದ್ದಾರೆ ಎಂದು ಸುಳ್ಳು ಸುದ್ದಿ ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ್ದ. ಈ ಬಗ್ಗೆ ಆಶಾ ಕಾರ್ಯಕರ್ತೆ ಹೆಬ್ರಿ ಠಾಣೆಗೆ ದೂರು ನೀಡಿದ್ದರು. ತಕ್ಷಣವೇ ಪ್ರಕರಣ ದಾಖಲಿಸಿಕೊಂಡ ಹೆಬ್ರಿ ಠಾಣಾಧಿಕಾರಿ ಅವರು ತನಿಖೆ ನಡೆಸಿ ರಾಹುಲ್ ಜೈನ್ ಕೃತ್ಯವೆಸಗಿದ್ದನ್ನು ಪತ್ತೆಹಚ್ಚಿದ್ದು ಕಾನೂನು ಕ್ರಮ ಜರುಗಿಸಿದ್ದಾರೆ. ಆರೋಪಿ ಲಾಕ್ ಡೌನ್ ವೇಳೆಯಲ್ಲಿ ೨೦ಕ್ಕೂ ಹೆಚ್ಚು ಮಂದಿಯ ತಂಡವನ್ನು ಕಟ್ಟಿಕೊಂಡು ಸ್ಥಳೀಯವಾಗಿ ಕ್ರಿಕೆಟ್ ಆಡುತ್ತಿದ್ದು ಕೆಲವು ದಿನಗಳ ಹಿಂದೆ ಆಶಾ ಕಾರ್ಯಕರ್ತೆ ತನ್ನ ಕರ್ತವ್ಯ ಎನ್ನುವಂತೆ ಆತನನ್ನು ಕರೆದು ಲಾಕ್ ಡೌನ್ ಇರುವಾಗ ಸುರಕ್ಷಿತವಾಗಿ ಮನೆಯಲ್ಲಿರು ಕ್ರಿಕೆಟ್ ಆಡಬೇಡ ಎಂದು ಹೇಳಿದ್ದರೆನ್ನಲಾಗಿದೆ.
ಇದೇ ದ್ವೇಷದಿಂದ ಆರೋಪಿ ಆಶಾ ಕಾರ್ಯಕರ್ತೆ ವಿರುದ್ಧ ಅವಹೇಳನಕಾರಿ ಸಂದೇಶ ರವಾನಿಸಿ ಸಿಕ್ಕಿಬಿದ್ದಿದ್ದಾನೆ. ಆರೋಪಿ ವಿರುದ್ಧ ಸ್ಥಳೀಯವಾಗಿ ಅನೇಕ ದೂರುಗಳು ಕೇಳಿಬರುತ್ತಿದ್ದು ಪೊಲೀಸರು ಕಠಿಣ ಕ್ರಮ
ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

Leave a Comment