ಹೆಬ್ಬುಲಿ ’ಗರ್ಜನೆ’  ಚಿತ್ರ ವೀಕ್ಷಿಸಲು ನೂಕು ನುಗ್ಗಲು

ಬೆಂಗಳೂರು,ಫೆ.೨೩-ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ “ಹೆಬ್ಬುಲಿ” ನಿನ್ನೆ ಮಧ್ಯರಾತ್ರಿಯಿಂದಲೇ ರಾಜ್ಯಾದ್ಯಂತ ತೆರೆಗೆ ಬಂದಿದ್ದು, ಟಿಕೆಟ್ ಪಡೆಯಲು ಅಭಿಮಾನಿಗಳು ನೂಕು ನುಗ್ಗಲು ಉಂಟಾಗಿ ಪರದಾಡುವಂತಾಯಿತು.
ಬೆಂಗಳೂರಿನ ಪ್ರಮುಖ ಚಿತ್ರಮಂದಿರದಲ್ಲಿ ನಟ ಸುದೀಪ್ ಅಭಿಮಾನಿಗಳ ಸಮ್ಮುಖದಲ್ಲಿ ಚಿತ್ರ ವೀಕ್ಷಿಸಿದರು. ತಮ್ಮ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಚಿತ್ರಮಂದಿರದಲ್ಲಿ ಜಮಾಯಿಸಿದ್ದರಿಂದ ಚಿತ್ರಮಂದಿರದ ಹೊರಗೆ ಮತ್ತು ಕೆ.ಜಿ ರಸ್ತೆಯಲ್ಲಿ ಜನ ಜಂಗುಳಿ ತುಂಬಿದ ಹಿನ್ನೆಲೆಯಲ್ಲ ಸಂಚಾರ ದಟ್ಟಣೆಯೂ ಉಂಟಾಗಿ ವಾಹನ ಸವಾರರು ಪರದಾಡುವಂತಾಯಿತು.
ಅಭಿಮಾನಿಗಳ ಹರ್ಷೋದ್ಘಾರದ ನಡುವೆ ಮಧ್ಯರಾತ್ರಿಯಿಂದಲೇ ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ ಹಾಗೂ ಬೆಂಗಳೂರಿನ ಕೆಲ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ಕಂಡಿದೆ. ಮತ್ತೆ ಕೆಲವೆಡೆ ಚಿತ್ರ ವಿಶೇಷ ಪ್ರದರ್ಶನ ಆಯೋಜಿಸಲಾಗಿತ್ತು.
ಅಭಿಮಾನಿಗಳ ಅಬ್ಬರದ ನಡುವೆ ಹೆಬ್ಬುಲಿ ಗರ್ಜನೆಯ ಸಂಭ್ರಮ ಎಲ್ಲಡೆ ಮನೆಮಾಡಿದೆ. ಚಿತ್ರಮಂದಿರದ ಮುಂಬಾಗದಲ್ಲಿ ೨೦-೩೦ ಅಡಿಯ ಕಟೌಟ್‌ಗಳು ರಾರಾಜಿಸುತ್ತಿದ್ದು, ಅಭಿಮಾನಿಗಳ ಸಡಗರ ಮುಗಿಲುಮುಟ್ಟಿದೆ.
ದಾವಣಗೆರೆಯ ಎರಡು ಚಿತ್ರ ಮಂದಿರಗಳಲ್ಲಿ ಮಧ್ಯರಾತ್ರಿ ೧ ಗಂಟೆಗೆ ಹೆಬ್ಬುಲಿ ತೆರೆಕಂಡಿತು. ಸುದೀಪ್ ಅಭಿಮಾನಿಗಳು ಚಿತ್ರಮಂದಿರಗಳ ಮುಂದೆ ಬೆಳಿಗ್ಗೆ ೮ ಗಂಟೆಯಿಂದಲೇ ಟಿಕೆಟ್‌ಗಾಗಿ ಮುಂದೆ ಸರದಿ ಸಾಲಿನಲ್ಲಿ ನಿಂತಿದ್ದರು. ಕೆಲವರು ಹೆಬ್ಬುಲಿ ಸ್ಟೈಲ್‌ನಲ್ಲಿ ಕೂದಲು ಬಿಟ್ಟಿದ್ದರೆ, ಇನ್ನು ಕೆಲ ಸುದೀಪ್ ಅಭಿಮಾನಿ ಬಳಗ ಹೀಗೆ ವಿವಿಧ ರೀತಿಯಲ್ಲಿ ಟಿ-ಶರ್ಟ್ ಧರಿಸುವ ಮೂಲಕ ಅಭಿಮಾನ ವ್ಯಕ್ತಪಡಿಸಿದರು.
ಮಧ್ಯ ರಾತ್ರಿ ೧೨.೩೦ಕ್ಕೆ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಚಿತ್ರ ಬಿಡುಗಡೆಯ ಹಿನ್ನೆಲೆಯಲ್ಲಿ ಚಿತ್ರಮಂದಿರ ಮುಂದೆ ವ್ಯಾಪಕ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.
ಕೃಷ್ಣ ನಿರ್ದೇಶನದಲ್ಲಿ ಹೆಬ್ಬುಲಿ ಚಿತ್ರ ತೆರೆಗೆ ಬಂದಿದ್ದು ಚಿತ್ರದಲ್ಲಿ ಸುದೀಪ್ ಪ್ಯಾರಾಕಮಾಂಡೋ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ರವಿಚಂದ್ರನ್,ಸುದೀಪ್ ಅಣ್ಣನಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ರವಿಕಿಶನ್, ರವಿಶಂಕರ್, ಚಿಕ್ಕಣ್ಣ, ಕಬೀರ್ ದುಹಾನ್ ಸಿಂಗ್ ಕೂಡಾ ನಟಿಸಿದ್ದಾರೆ. ಮೊದಲ ಬಾರಿಗೆ ತಮಿಳು ನಟಿ ಅಮಲಾ ಪಾಲ್ ಜೊತೆಯಾಗಿದ್ದಾರೆ. ಎಸ್.ಆರ್ ವಿ ಪ್ರೊಡಕ್ಷನ್‌ನ ರಘುನಾಥ್ ಮತ್ತು ಉಮಾಪತಿ ಫಿಲ್ಸಂನ ಉಮಾಪತಿ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

Leave a Comment